ಡೈಲಿ ವಾರ್ತೆ:27 ಮೇ 2023
✒️ ಓಂಕಾರ ಎಸ್. ವಿ. ತಾಳಗುಪ್ಪ
ಮುಪ್ಪಾನೆ ಲಾಂಚ್ ತಾತ್ಕಾಲಿಕ ಸ್ಥಗಿತ
ಸಾಗರ :ದ್ವೀಪದ ಕರೂರು ಹೋಬಳಿಯಿಂದ ಕಾರ್ಗಲ್. ಜೋಗಕ್ಕೆ ತ್ವರಿತವಾಗಿ ಸಂಪರ್ಕ ಕಲ್ಪಿಸುವ ಹಲ್ಕೆ – ಮುಪ್ಪಾನೆ ಲಾಂಚ್ ಮಾರ್ಗ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
ಶರಾವತಿ ಹಿನ್ನೀರಿನಲ್ಲಿ ನೀರಿನ ಹರಿವು ಕಡಿಮೆ ಕಂಡುಬಂದ ಹಿನ್ನೆಲೆಯಲ್ಲಿ ಹಲ್ಕೆ ಮುಪ್ಪಾನೆ ಲಾಂಚ್ ಗೆ ಆಡಚಣೆ ಉಂಟಾಗಿದೆ. ಶುಕ್ರವಾರ ಬೆಳಿಗ್ಗೆ ಸಹ ಲಾಂಚ್ ಸಂಚಾರದ ವೇಳೆ ಮರದ ದಿಮ್ಮಿ ಹಾಗೂ ಮರಳಿನ ದಿಬ್ಬಗಳು ಲಾಂಚ್ ತಳಭಾಗದ ಬಾಟಮ್ ಗೆ ಲಗುಲಿದೆ. ಇದರಿಂದ ಲಾಂಚ್ ತಾಂತ್ರಿಕ ದೋಷಕ್ಕೆ ಒಳಗಾಗುವ ಸಾಧ್ಯತೆಯಿದ್ದು. ಮುಂಜಾಗ್ರತಾ ಕ್ರಮವಾಗಿ ಹಾಗೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಮೇ 26ರಿಂದ ತಾತ್ಕಾಲಿಕವಾಗಿ ಲಾಂಚ್ ಸೇವೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ಕಡವು ನಿರೀಕ್ಷಕ ಧನೇಂದ್ರ ಕುಮಾರ್ ತಿಳಿಸಿದ್ದಾರೆ.
ಈ ಭಾಗದ ತುಮರಿ. ಮಾರಲಗೋಡು. ಬ್ಯಾಕೋಡು ಭಾಗದ ತುರ್ತು ಆರೋಗ್ಯ ಸೇವೆ ಸೇರಿದಂತೆ ಜೋಗ ಕಾರ್ಗಲ್ ತೆರಳಲು ಹಾಗೂ ಸಿಗಂದೂರು ಪ್ರವಾಸಿಗರು ಹೊಳೆಬಾಗಿಲು ಲಾಂಚ್ ನಲ್ಲಿ ಪ್ರತಿನಿತ್ಯ ಜನದಟ್ಟಣೆ ಇರುವ ಕಾರಣ ಬಹುತೇಕರು ಈ ಸುಗಮ ಮಾರ್ಗದ ಮೊರೆ ಹೋಗಿದ್ದರು ಸದ್ಯ ಇದು ಕೂಡ ಸ್ಥಗಿತಗೊಂಡಿದ್ದು ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.
ಸದ್ಯ ಈ ಭಾಗದಲ್ಲಿ ಮುಂಗಾರು ಇನ್ನೂ ಪ್ರಾರಂಭವಾಗಿಲ್ಲ. ವಾಡಿಕೆ ಮಳೆ ಸಹಿತ ಸರಿಯಾಗಿ ಆಗಿಲ್ಲ ಹೀಗಾಗಿ ಮುಂದಿನ ದಿನಗಳಲ್ಲಿ ನೀರಿನ ಪ್ರಮಾಣ ಆಧರಿಸಿ ಲಾಂಚ್ ಸೇವೆ ನೀಡಲಿದೆ ಎಂದು ಕಡವು ಅಧಿಕಾರಿಗಳು ಸ್ಪಷ್ಟಪಡಿಸಿದರು.