ಡೈಲಿ ವಾರ್ತೆ: 31 ಮೇ 2023
ದಕ್ಷಿಣ ಕನ್ನಡ:ಸಾಮಾಜಿಕ ಜಾಲತಾಣದಲ್ಲಿ ನಮಾಝ್ ಬಗ್ಗೆ ಅವಹೇಳನ:ಆರೋಪಿ ವಿರುದ್ಧ ದೂರು ದಾಖಲು
ಪುತ್ತೂರು : ಸಾಮಾಜಿಕ ಜಾಲತಾಣವಾದ ವಾಟ್ಸಪ್ ಗ್ರೂಪ್‌ನಲ್ಲಿ ಮುಸ್ಲಿಮರ ಪ್ರಾರ್ಥನೆಯಾದ ನಮಾಜ್ ಬಗ್ಗೆ ಅವಹೇಳನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಯುವಜನ ಪರಿಷತ್ ವತಿಯಿಂದ ಪುತ್ತೂರು ಡಿವೈಎಸ್‌ಪಿ ಗಾನ ಪಿ ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಅರುಣ್ ಪುತ್ತಿಲ ಬ್ರಿಗೇಡ್ ಪಾಣಾಜೆ ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಸಂದೀಪ್ ಪನಿಯನ್ ಎಂಬಾತ ಕಾರ್ಟೂನ್ ರಚಿಸಿ ಅದರಲ್ಲಿ ನಮಾಝಿನ ವ್ಯಂಗ್ಯಚಿತ್ರ ಹಾಕಿ ಅವಹೇಳನ ಮಾಡಿದ್ದು, ಇದರಿಂದಾಗಿ ಭಾವನೆಗಳಿಗೆ ಚ್ಯುತಿಯಾಗಿದೆ. ಅಲ್ಲದೆ ತೀವ್ರ ನೋವುಂಟಾಗಿದೆ. ಸಮಾಜದಲ್ಲಿ ಕೋಮು ಭಾವನೆ ಕೆರಳಿಸಿ ಅಶಾಂತಿ ಉಂಟು ಮಾಡಲು ಈ ಕೃತ್ಯ ಮಾಡಲಾಗಿದೆ. ಈತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ಜೊತೆ ಕಾರ್ಯದರ್ಶಿ ನೌಶಾದ್ ಬೊಳುವಾರು, ಸದಸ್ಯ ಮೈನುದ್ದೀನ್ ವಿಟ್ಲ ಉಪಸ್ಥಿತರಿದ್ದರು.