ಡೈಲಿವಾರ್ತೆ: 28/ನ./2026

ಮಲ್ಪೆಯಲ್ಲಿ ‘ಸೆರೆನಾ ಲಕ್ಸುರಿ ಬೀಚ್ ರೆಸಾರ್ಟ್’ ಲೋಕಾರ್ಪಣೆ
ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಮೆರುಗು: ಉದ್ಯೋಗ ಸೃಷ್ಟಿಗೆ ಪೂರಕವಾಗಲಿದೆ – ಗಣ್ಯರ ಅಭಿಮತ

ಮಲ್ಪೆ: ಕರಾವಳಿ ಭಾಗದಲ್ಲಿ ಪ್ರವಾಸಿಗರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಂತೆ ನಿರ್ಮಿಸಲಾಗಿರುವ ‘ಸೆರೆನಾ ಲಕ್ಸುರಿ ಬೀಚ್ ರೆಸಾರ್ಟ್’ ಮಲ್ಪೆಯಲ್ಲಿ ಲೋಕಾರ್ಪಣೆಗೊಂಡಿತು.

ರೆಸಾರ್ಟ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನಾಡೋಜ ಡಾ. ಜಿ. ಶಂಕರ್, ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಪ್ರವಾಸಿಗರಿಗೆ ಉತ್ತಮ ಆತಿಥ್ಯ ಹಾಗೂ ಸೌಲಭ್ಯ ಒದಗಿಸುವ ಉದ್ದೇಶದಿಂದ ಸೆರೆನಾ ಬೀಚ್ ರೆಸಾರ್ಟ್ ನಿರ್ಮಿಸಲಾಗಿದೆ. ತಾನು ಸಂಪಾದಿಸುವ ಆದಾಯದ ಒಂದು ಭಾಗವನ್ನು ಸಮಾಜದ ಬಡವರ ಸೇವೆಗಾಗಿ ವಿನಿಯೋಗಿಸುತ್ತೇನೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ. ಮಂಜುನಾಥ ಭಂಡಾರಿ ಮಾತನಾಡಿ, ಜಿ. ಶಂಕರ್ ಅವರು ನಿರ್ಮಿಸಿರುವ ಈ ರೆಸಾರ್ಟ್ ಕರಾವಳಿ ಪ್ರದೇಶಕ್ಕೆ ಮಹತ್ವದ ಕೊಡುಗೆಯಾಗಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಣಜಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಬೇಕೆಂಬ ಆಶಯವಿದೆ. ಆದರೆ, ಆಟಗಾರರು ಉಳಿದುಕೊಳ್ಳಲು ಅಗತ್ಯವಾದ ಗುಣಮಟ್ಟದ ವಸತಿ ವ್ಯವಸ್ಥೆಯ ಕೊರತೆಯಿದೆ. ಸ್ಟಾರ್ ಕ್ರಿಕೆಟಿಗರು ಉಳಿದುಕೊಳ್ಳುವಂತಹ ಉನ್ನತ ಮಟ್ಟದ ಹೋಟೆಲ್‌ನ್ನು ಜಿ. ಶಂಕರ್ ನಿರ್ಮಿಸಿರುವುದು ಈ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎಂದರು.

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಉಡುಪಿ ಜಿಲ್ಲೆ ಜಾಗತಿಕ ಮಟ್ಟದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಈ ಬೆಳವಣಿಗೆಗೆ ಡಾ. ಜಿ. ಶಂಕರ್ ಅವರ ಕೊಡುಗೆ ಮಹತ್ವದ್ದಾಗಿದೆ. ಇಂತಹ ಪ್ರವಾಸೋದ್ಯಮ ಯೋಜನೆಗಳು ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲಿವೆ ಎಂದರು.

ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, 1993-94ರ ಅವಧಿಯಲ್ಲಿ ಉಡುಪಿಗೆ ಆಗಮಿಸಿದ ಜಿ. ಶಂಕರ್ ಅವರು ಅಂದಿನಿಂದಲೇ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಮುಖ್ಯಮಂತ್ರಿ ಕೂಡ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವಂತೆ ಹೇಳಿದ್ದಾರೆ. ಅಗತ್ಯ ಅನುಮತಿಗಳನ್ನು ಪಡೆದು ಇಂತಹ ರೆಸಾರ್ಟ್‌ಗಳನ್ನು ನಿರ್ಮಿಸುವುದರಿಂದ ಪ್ರವಾಸೋದ್ಯಮ ಬೆಳವಣಿಗೆಯೊಂದಿಗೆ ಸ್ಥಳೀಯರಿಗೆ ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ ಎಂದರು.

ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ಜಿ. ಶಂಕರ್ ಅವರ ಈ ರೆಸಾರ್ಟ್ ಕರಾವಳಿ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಡಾ. ಜಿ. ಶಂಕರ್ ಅವರು ಜೀವನದುದ್ದಕ್ಕೂ ಸೇವಾ ಮನೋಭಾವ ಹಾಗೂ ಸಾಮಾಜಿಕ ಬದ್ಧತೆಯನ್ನು ಮೈಗೂಡಿಸಿಕೊಂಡು ಬಂದವರು. ಎಲ್ಲ ಸಮುದಾಯಗಳ ಪ್ರೀತಿ, ವಿಶ್ವಾಸ ಗಳಿಸಿರುವ ಅವರು ಪ್ರವಾಸೋದ್ಯಮದ ಕನಸಿನೊಂದಿಗೆ ಈ ರೆಸಾರ್ಟ್ ನಿರ್ಮಿಸಿದ್ದಾರೆ. ಇಂತಹ ಉದ್ಯಮಗಳ ಮೂಲಕ ಉದ್ಯೋಗ ಅರಸುವ ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆಯಲಿವೆ ಎಂದರು.

ಉದ್ಯಮಿ ಆನಂದ ಸಿ. ಕುಂದರ್ ಮಾತನಾಡಿ, ಅತ್ಯಂತ ರಮಣೀಯ ಪರಿಸರದಲ್ಲಿ ಈ ರೆಸಾರ್ಟ್ ನಿರ್ಮಿಸಲಾಗಿದೆ. ಜಿ. ಶಂಕರ್ ಅವರು ಸಂಪಾದಿಸುವ ಸಂಪತ್ತಿನ ಬಹುಪಾಲು ಸಮಾಜದ ಬಡವರ ಕಲ್ಯಾಣಕ್ಕೆ ವಿನಿಯೋಗವಾಗುತ್ತದೆ ಎಂದರು.
ಸಾಯಿ ರಾಧಾ ಸಮೂಹದ ಮನೋಹರ ಶೆಟ್ಟಿ ಮಾತನಾಡಿ, ಇಂತಹ ಪ್ರವಾಸೋದ್ಯಮ ಯೋಜನೆಗಳು ನಿರ್ಮಾಣವಾದಾಗ ಈ ಭಾಗದ ಅಭಿವೃದ್ಧಿಗೆ ಉತ್ತೇಜನ ದೊರೆಯಲಿದೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿದ ಅವರು
ರಾಜ್ಯ ಸರ್ಕಾರ ಕರಾವಳಿ ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ ನೀಡಿದ್ದು, ವಾಟರ್ ಮೆಟ್ರೋ, ಕ್ರೂಸ್ ಪ್ರವಾಸೋದ್ಯಮ, ಜಲಸಾರಿಗೆ ಹಾಗೂ ಉತ್ತಮ ರಸ್ತೆ ಸಂಪರ್ಕದಂತಹ ಯೋಜನೆಗಳ ಮೂಲಕ ಕರಾವಳಿ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ.
ಕೊಚ್ಚಿಯ ಮಾದರಿಯಲ್ಲಿ ಕರಾವಳಿಯಲ್ಲೂ ವಾಟರ್ ಮೆಟ್ರೋ ಯೋಜನೆ ಅನುಷ್ಠಾನಗೊಳಿಸುವ ಚಿಂತನೆಯಿದೆ. ಎನ್‌ಎಂಪಿಟಿ ವ್ಯಾಪ್ತಿಯಲ್ಲಿ ಕ್ರೂಸ್ ಪ್ರವಾಸೋದ್ಯಮ ಚಟುವಟಿಕೆಗಳು ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಇವುಗಳನ್ನು ವಿಸ್ತರಿಸುವ ಉದ್ದೇಶವಿದೆ. ಪ್ರವಾಸೋದ್ಯಮದ ಬೆಳವಣಿಗೆಯಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಬೇಕು ಎಂದರು.

ಜಿ. ಶಂಕರ್ ಅವರು ಕಳೆದ ಹಲವು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಔದ್ಯೋಗಿಕ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ತಮ್ಮ ಸಂಪಾದನೆಯ ಒಂದು ಭಾಗವನ್ನು ಸಮಾಜದ ಬಡವರ ಸೇವೆಗೆ ವಿನಿಯೋಗಿಸುತ್ತಿರುವ ಅವರ ಸಮಾಜಮುಖಿ ಕಾರ್ಯಗಳು ಇತರರಿಗೆ ಮಾದರಿಯಾಗಿವೆ. ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಾಗಿರುವ ಅವರ ಪ್ರಯತ್ನ ಶ್ಲಾಘನೀಯ ಎಂದು ಗಫೂರ್ ಅಭಿನಂದಿಸಿದರು.

ಸಮಾರಂಭದಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ನಟ ಶ್ರೀರಾಮ್, ನಟಿ ತಪಸ್ವಿನಿ, ನಟ ರೂಪೇಶ್ ಶೆಟ್ಟಿ, ಎಡ್ಲಿನ್ ಕರ್ಕೆಡಾ, ಪುರುಷೋತ್ತಮ ಶೆಟ್ಟಿ, ಮದನ್ ಕುಮಾರ್ ಉಪ್ಪುಂದ, ಜಯ ಸಿ. ಕೋಟ್ಯಾನ್, ಕೇಶವ ಕುಂದರ್, ಶಂಕರ್ ಕುಂದರ್, ನಾಗರಾಜ ಸುವರ್ಣ, ಕರುಣಾಕರ ಸಾಲ್ಯಾನ್, ಕುತ್ಯಾರು ನವೀನ್ ಶೆಟ್ಟಿ, ಮೋಹನ್ ಬೆಂಗ್ರೆ, ಉದಯಕುಮಾರ್ ಹಟ್ಟಿಯಂಗಡಿ, ಸತೀಶ್ ಅಮೀನ್, ಕಿಶೋರ್ ಸುವರ್ಣ, ಅನಿಲ್ ಕುಮಾರ್ ಬೊಕ್ಕಪಟ್ಣ ಸೇರಿದಂತೆ ಹಲವು ಗಣ್ಯರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ರೆಸಾರ್ಟ್ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ ಎಂಜಿನಿಯರ್‌ಗಳಾದ ಯೋಗೀಶ್ಚಂದ್ರ, ಜಗದೀಶ್ ಕಾಂಚನ್, ರಾಹುಲ್ ಶೆಟ್ಟಿ ಹಾಗೂ ಶ್ರೀಪತಿ ಭಟ್ ಉಚ್ಚಿಲ, ಕವನ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಎಸ್.ಕೆ. ಆನಂದ್ ವಂದಿಸಿದರು. ಸಾಹಿಲ್ ಕಾರ್ಯಕ್ರಮ ನಿರೂಪಿಸಿದರು.