ಡೈಲಿ ವಾರ್ತೆ:13ಜೂನ್ 2023
ದರೋಡೆಕೊರರನ್ನು ಹಿಡಿಯಲು ರಾತ್ರಿ ವೇಳೆ ಹೆದ್ದಾರಿಗಳಲ್ಲಿ ಮರವೇರಿ ಕುಳಿತಿರುವ ಖಾಕಿ ಪಡೆ.!
ಆಗ್ರಾ:ಜನನಿಬಿಡ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಕರನ್ನು ಲೂಟಿ ಮಾಡಿದ ಎರಡು ಇತ್ತೀಚಿನ ಪ್ರಕರಣಗಳ ನಂತರ, ಮಥುರಾ ಪೊಲೀಸರು ಭಾನುವಾರ ಅಪರಾಧದಲ್ಲಿ ಭಾಗಿಯಾಗಿರುವ ನಾಲ್ವರು ಶಂಕಿತರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ.
ಸಿವಿಲ್ ಡ್ರೆಸ್‌ನಲ್ಲಿರುವ ಪೊಲೀಸರು ಪ್ರಮುಖ ರಸ್ತೆಯಲ್ಲಿ ತೀಕ್ಷ್ಣವಾದ ನಿಗಾ ಇಡಲು ಮತ್ತು ಇನ್ನೊಂದು ಲೂಟಿಗೆ ಪ್ರಯತ್ನಿಸಿದರೆ ಅಪರಾಧಿಗಳನ್ನು ಹಿಡಿಯಲು ಈ ಹೆದ್ದಾರಿಗಳಲ್ಲಿ ಉದ್ದಕ್ಕೂ ಮರಗಳ ಮೇಲೆ ಹತ್ತಿ ಕುಳಿತುಕೊಂಡಿದ್ದಾರೆ.
ಹೆದ್ದಾರಿಗಳಲ್ಲಿ ತೀವ್ರವಾಗಿ ತಪಾಸಣೆಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.ಟೋಲ್ ಪ್ಲಾಜಾದಲ್ಲಿ ಪ್ರಕಟಣೆಗಳನ್ನು ಸಹ ಹೊರಡಿಸಲಾಗುತ್ತಿದೆ. ಎಕ್ಸ್‌ಪ್ರೆಸ್‌ವೇನಲ್ಲಿ ವಾಹನಗಳನ್ನು ನಿಲ್ಲಿಸದಂತೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ.
ಮೇ.29ರಂದು ದೆಹಲಿಯ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಎಂಜಿನಿಯರ್ ಅವರು ಪತ್ನಿ ಮತ್ತು ಚಾಲಕನೊಂದಿಗೆ ತೆರಳುವಾಗ ಅಪರಿಚಿತ ವ್ಯಕ್ತಿಗಳು ನಗದು ಮತ್ತು ಚಿನ್ನಾಭರಣಗಳನ್ನು ದೋಚಿದ್ದರು. ಅದೇ ರೀತಿ ಜೂನ್ 2 ರಂದು ಫಿರೋಜಾಬಾದ್‌ನಿಂದ ದೆಹಲಿಗೆ ತೆರಳುತ್ತಿದ್ದ ದಿನಸಿ ವ್ಯಾಪಾರಿ ಮತ್ತು ಅವರ ಮೂವರು ಸಂಬಂಧಿಕರನ್ನು ದರೋಡೆ ಮಾಡಲಾಗಿತ್ತು.
ಎರಡೂ ಘಟನೆಗಳು ಮಥುರಾ ಜಿಲ್ಲೆಯ ಮೂಲಕ ಹಾದುಹೋಗುವ ಎಕ್ಸ್‌ಪ್ರೆಸ್‌ವೇ ಭಾಗದಲ್ಲಿ ರಾತ್ರಿ ತಡವಾಗಿ ಸಂಭವಿಸಿವೆ.ಕಿಡಿಗೇಡಿಗಳು ಮೊದಲು ವಾಹನಗಳನ್ನು ನಿಲ್ಲಿಸಲು ಕಲ್ಲು ತೂರಾಟ ನಡೆಸುತ್ತಾರೆ.ವಾಹನ ನಿಲ್ಲಿಸಿದಾಗ ದರೋಡೆ ಮಾಡುತ್ತಾರೆ.
ಇದರಿಂದಾಗಿ ಹೆದ್ದಾರಿಯಲ್ಲಿ ಕಳ್ಳರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಎಕ್ಸ್‌ಪ್ರೆಸ್‌ವೇಯ ದಾರಿಯುದ್ದಕ್ಕೂ ಎರಡು ಕಿ.ಮೀ.ಗಳ ಅಂತರದಲ್ಲಿ ಒಬ್ಬೊಬ್ಬ ಪೊಲೀಸ್ ಮರವೇರಿ, ದರೋಡೆಕೋರರತ್ತ ದೃಷ್ಟಿ ಹಾಯಿಸಿದ್ದಾರೆ. ಇದಕ್ಕಾಗಿ ನೂರುಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.ಖಾಕಿ ಕಳಚಿ, ಜನಸಾಮಾನ್ಯರಂತೆ ಬಟ್ಟೆ ಧರಿಸಿರುವ ಪೊಲೀಸರು, ಪಿಸ್ತೂಲ್ ಮತ್ತು ಬೈನಾಕ್ಯುಲರ್‌ಗಳೊಂದಿಗೆ ಅಪರಾಧಿಗಳ ಪತ್ತೆಗೆ ಬಲೆ ಬೀಸಿದ್ದಾರೆ.