ಡೈಲಿ ವಾರ್ತೆ:14 ಜೂನ್ 2023
ತೆಕ್ಕಟ್ಟೆ ಮಾಲಾಡಿಯಲ್ಲಿ ಬೋನಿಗೆ ಬಿದ್ದ ಚಿರತೆ!
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿನ ಶ್ರೀ ನಂದಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಹಿಂಭಾಗದ ಹಾಡಿಯಲ್ಲಿ ಅರಣ್ಯ ಇಲಾಖೆಯಿಟ್ಟ ಬೋನಿಗೆ ಗಂಡು ಚಿರತೆ ಬಿದ್ದ ಘಟನೆ ಜೂ. 14 ರಂದು ಬುಧವಾರ ಬೆಳಿಗ್ಗೆ ಕಂಡುಬಂದಿದೆ. ಘಟನಾಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.
ಕಳೆದ 5 ವರ್ಷದಲ್ಲಿ ಈ ಪ್ರದೇಶದಲ್ಲಿಟ್ಟ ಬೋನಿಗೆ ಬಿದ್ದ 8ನೇ ಚಿರತೆ ಇದಾಗಿದೆ. ಈ ಭಾಗದಲ್ಲಿ ಆಗ್ಗಾಗೆ ಚಿರತೆ ಪ್ರತ್ಯಕ್ಷವಾಗುತ್ತಿದ್ದು ಸಮೀಪದ ಶಾಲೆಗೆ ಬರುವ ವಿದ್ಯಾರ್ಥಿಗಳು ಕೂಡ ಚಿರತೆ ಕಾಟದಿಂದ ಭಯಭೀತರಾಗಿದ್ದರು. ಕಳೆದ ವಾರವಷ್ಟೇ ಇಲ್ಲಿಗೆ ಸಮೀಪದ ಕೆಲವು ಮನೆಗಳ ಅಂಗಳಕ್ಕೆ ಬಂದು ನಾಯಿ ಎಳೆದೊಯ್ಯಲು ಪ್ರಯತ್ನಿಸಿತ್ತು. ನಿರಂತರ ಈ ಭಾಗದಲ್ಲಿ ಚಿರತೆ ಕಾಟವಿದ್ದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು ಅರಣ್ಯ ಇಲಾಖೆ ಬೋನ್ ಇಟ್ಟು ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ಕೆಲವು ದಿನಗಳ ಹಿಂದೆ ಬೋನು ಇಡಲಾಗಿದ್ದು ಅಂದಾಜು 4-5 ವರ್ಷ ಪ್ರಾಯದ ಗಂಡು ಚಿರತೆ ಸೆರೆಯಾಗಿದೆ. ಸ್ಥಳೀಯ ನಿವಾಸಿಗಳಾದ ಸತೀಶ್ ದೇವಾಡಿಗ ಮತ್ತು ಸುರೇಶ್ ಅವರು ಚಿರತೆ ಸೆರೆ ಕಾರ್ಯಾಚರಣೆಗೆ ಇಲಾಖೆ ಇಟ್ಟ ಬೋನಿಗೆ ನಾಯಿ ಕಟ್ಟಿ ಸಹಕಾರ ನೀಡುತ್ತಿದ್ದರು.
ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಉಪವಲಯ ಅರಣ್ಯಾಧಿಕಾರಿ ಉದಯ್, ಗಸ್ತು ಅರಣ್ಯ ಪಾಲಕಿ ಮಾಲತಿ, ಸ್ಥಳೀಯ ಪ್ರಮುಖರಾದ ಗಣಪತಿ ಟಿ. ಶ್ರೀಯಾನ್, ಸುರೇಶ್ ದೇವಾಡಿಗ, ಸತೀಶ್ ದೇವಾಡಿಗ ಮೊದಲಾದವರು ಭೇಟಿ ನೀಡಿದ್ದಾರೆ.