ಡೈಲಿ ವಾರ್ತೆ:15 ಜೂನ್ 2023

ಮಂಗಳೂರು: ಮನೆಗೆ 7.71 ಲಕ್ಷ ವಿದ್ಯುತ್ ಬಿಲ್ !

ಮಂಗಳೂರು: ಉಳ್ಳಾಲ ಬೈಲಿನ ಮನೆಯೊಂದಕ್ಕೆ ಬರೋಬ್ಬರಿ 7 ಲಕ್ಷ ವಿದ್ಯುತ್ ಬಿಲ್ ಬಂದಿದ್ದನ್ನು ಕಂಡು ಮನೆ ಮಾಲೀಕ ಶಾಕ್ ಆಗಿದ್ದಾರೆ. ಉಳ್ಳಾಲ ಬೈಲಿನ ಸದಾಶಿವ ಆಚಾರ್ಯ ಅವರ ಮನೆಗೆ ನಿನ್ನೆ ಬಂದ ಮೀಟರ್ ರೀಡರ್ ಬರೋಬರಿ 7,71,072 ರೂ. ಬಿಲ್ಲನ್ನು ನೀಡಿ ತೆರಳಿದ್ದಾನೆ.

ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ ಅವರ ಮನೆಗೆ ₹7.71 ಲಕ್ಷ ಮೊತ್ತದ ವಿದ್ಯುತ್ ಬಿಲ್ ನೀಡಲಾಗಿತ್ತು. ಮೀಟರ್ ರೀಡರ್ ಮಾಡಿದ ತಪ್ಪು ಗಮನಕ್ಕೆ ಬರುತ್ತಿದ್ದಂತೆಯೇ ಮೆಸ್ಕಾಂ ಅಧಿಕಾರಿಗಳು ತಪ್ಪನ್ನು ಸರಿಪಡಿಸಿ, ₹2,833 ಮೊತ್ತದ ಪರಿಷ್ಕೃತ ಬಿಲ್ಲು ನೀಡಿದ್ದಾರೆ.

ನಮಗೆ ತಿಂಗಳಿಗೆ ಸರಾಸರಿ ಮೂರು ಸಾವಿರ ಬಿಲ್ಲು ಬರುತ್ತಿತ್ತು. ನಾವು ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಬಿಲ್ಲು ಪಾವತಿಸಿದ್ದೇವೆ. ಈಗ ಇಷ್ಟೊಂದು ಬಿಲ್ಲು ಬರಲು ಹೇಗೆ ಸಾಧ್ಯ ಎಂದು ಮೀಟರ್ ರೀಡಿಂಗ್ ಮಾಡಿದ ವ್ಯಕ್ತಿಯಲ್ಲಿ ವಿಚಾರಿಸಿದಾಗ ಅದೆಲ್ಲ ನನಗೆ ಗೊತ್ತಿಲ್ಲ. ಮೆಸ್ಕಾಂ ಕಚೇರಿಗೆ ಹೋಗಿ ವಿಚಾರಿಸಿ ಎಂದು ಉಡಾಫೆಯ ಉತ್ತರ ನೀಡಿ ತೆರಳಿದ್ದಾನಂತೆ. ವಿದ್ಯುತ್ ಬಿಲ್ ರಸೀದಿಯಲ್ಲಿ 99,338 ಯೂನಿಟ್ ಖರ್ಚಾಗಿದ್ದು, 7,71,072 ರೂಪಾಯಿ ಬಿಲ್ ನಮೂದಿಸಲಾಗಿದೆ. ಈ ಪ್ರಮಾದ ತಿಳಿದ ಮೆಸ್ಕಾಂ ಅಧಿಕಾರಿಗಳು, ಪರಿಷ್ಕೃತ ಬಿಲ್ಲನ್ನು ಸದಾಶಿವ ಆಚಾರ್ಯ ಅವರ ಮನೆಗೆ ತಲುಪಿಸಿದರು.

ಏಜೆನ್ಸಿಗಳ ಮೂಲಕ ಮೀಟರ್ ರೀಡಿಂಗ್ ಮಾಡಿಸಿ ಬಿಲ್ಲು ನೀಡಲಾಗುತ್ತಿದೆ. ಮೀಟರ್ ರೀಡರ್ ಮಾಡಿದ ತಪ್ಪಿನಿಂದಾಗಿ ಹೀಗೆ ವಿದ್ಯುತ್ ಬಿಲ್ಲು ಮುದ್ರಣವಾಗಿತ್ತು. ಬಿಲ್ಲಲ್ಲಿ ಲೋಪ ಕಂಡುಬಂದರೆ ಅದನ್ನು ಗ್ರಾಹಕರಿಗೆ ಕೊಡುವಂತಿಲ್ಲ. ಆದರೂ, ಆತ ಕೊಟ್ಟಿದ್ದಾರೆ. ನಮಗೆ ಮಾಹಿತಿ ಲಭಿಸಿದ ತಕ್ಷಣ ನಾವು ಪರಿಷ್ಕೃತ ಬಿಲ್ಲನ್ನು ಸದಾಶಿವ ಅವರ ಮನೆಗೆ ತಲಪುಸಿದ್ದೇವೆ ಎಂದು ಮೆಸ್ಕಾಂನ ಉಳ್ಳಾಲ ಉಪ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ದಯಾನಂದ ತಿಳಿಸಿದರು.