ಡೈಲಿ ವಾರ್ತೆ: 15 ಜೂನ್ 2023

ಗುಜರಾತ್‍ಗೆ ಬಿಪರ್ ಜಾಯ್ ಚಂಡಮಾರುತ ಕಂಟಕ:150 ಕಿ.ಮೀ ವೇಗದಲ್ಲಿ ಗಾಳಿ ಮಳೆ

ಗಾಂಧೀನಗರ: ಕೆಲವೇ ನಿಮಿಷಗಳಲ್ಲಿ ಬಿಪರ್ ಜಾಯ್ ಚಂಡಮಾರುತ ಗುಜರಾತ್‍ನ ಮಾಂಡ್ವಿ ತೀರಕ್ಕೆ ಅಪ್ಪಳಿಸಲಿದೆ. ಈಗಾಗಲೇ ಚಂಡಮಾರುತ ತೀವ್ರತೆಗೆ ಅರಬ್ಬಿ ಸಮುದ್ರ ತೀರ ಪ್ರದೇಶ ತತ್ತರಿಸಿದೆ. ರಾತ್ರಿಯ ವೇಳೆಗೆ ಚಂಡಮಾರುತ ಜಖೌ ಬಂದರು ದಾಟಲಿದೆ.

ಗುಜರಾತ್ ತೀರ ಪ್ರದೇಶದಲ್ಲಿ ಸದ್ಯಕ್ಕೀ 60-70 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಸಹಿತ ಜೋರು ಮಳೆ ಆಗ್ತಿದೆ. ಇನ್ನು ಸ್ವಲ್ಪ ಹೊತ್ತಲ್ಲೇ ಗಾಳಿಯ ವೇಗ ಇನ್ನೂ ಹೆಚ್ಚಾಗಲಿದೆ. ದೊಡ್ಡ ಮಟ್ಟದಲ್ಲಿ ಗಾಳಿ ಬೀಸುತ್ತಿರೋದ್ರಿಂದ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಸುಮಾರು 75 ಸಾವಿರ್ಕಕೂ ಹೆಚ್ಚು ಕಡಲ ತೀರ ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸರ್ಕಾರ ಶಿಫ್ಟ್ ಮಾಡಿದೆ.

ಸೈಕ್ಲೋನ್ ತೀವ್ರತೆಯನ್ನು ಗಮನದಲ್ಲಿರಿಸಿಕೊಂಡು ಸಮೀಪ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ದೇಗುಲ, ಕಚೇರಿಗಳು, ಶಾಲೆಗಳನ್ನು ಬಂದ್ ಮಾಡಲಾಗಿದೆ. ಕಛ್, ಜುನಾಗಢ್, ದ್ವಾರಕಾ, ಪೋರ್ ಬಂದರ್, ಮಾಂಡವಿ, ಗಾಂಧಿನಗರ, ಮೊರ್ಬಿ, ಸೌರಾಷ್ಟ್ರಗಳಲ್ಲಿ ಎನ್‍ಡಿಆರ್‍ಎಫ್ ತಂಡ ನಿಯೋಜನೆ ಮಾಡಲಾಗಿದೆ. ಇಲ್ಲಿನ ನಿವಾಸಿಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಈಗಿಂದಲೇ ರಕ್ಷಣಾ ಕಾರ್ಯಾಚರಣೆಗೆ ಸೇನಾ ಪಡೆಗಳು ಸಜ್ಜಾಗಿವೆ. 500ಕ್ಕೂ ಹೆಚ್ಚು ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ನಿರತವಾಗಿರಲಿವೆ. ಈಗಾಗ್ಲೇ ದ್ವಾರಕದ ಗೋಮತಿ ಘಾಟ್‍ಗೆ ಗೃಹ ಸಚಿವ ಹರ್ಷ ಸಾಂಗ್ವಿ ಭೇಟಿ ನೀಡಿದ್ದು ಜನರನ್ನು ಸ್ಥಳಾಂತರ ಮಾಡಿಸ್ತಿದ್ದಾರೆ.