ಡೈಲಿ ವಾರ್ತೆ: 16 ಜೂನ್ 2023
ಮಣಿಪುರ ಹಿಂಸಾಚಾರ: ಕೇಂದ್ರ ಸಚಿವರ ಮನೆಗೆ ಬೆಂಕಿಯಿಟ್ಟ ಕಿಡಿಗೇಡಿಗಳು
ಇಂಫಾಲ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ನಡುವೆ ಶುಕ್ರವಾರ ನಸುಕಿನ ವೇಳೆ ಇಂಫಾಲದಲ್ಲಿರುವ ಕೇಂದ್ರ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್ ಅವರ ಮನೆಗೆ ಕೆಲ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಶುಕ್ರವಾರ ನಸುಕಿನ ವೇಳೆ ಈ ಘಟನೆ ನಡೆದಿದೆ. ಕಿಡಿಗೇಡಿಗಳು ಸಿಂಗ್ ಅವರ ಮನೆಗೆ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ. ಸದ್ಯ ಘಟನೆ ವೇಳೆ ಕೇಂದ್ರ ಸಚಿವರು ಮನೆಯಲ್ಲಿ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಾರದ ಆರಂಭದಲ್ಲಿ ರಾಜ್ಯ ಸಚಿವ ಹಾಗೂ ಬಿಜೆಪಿ ನಾಯಕ ನೆಮ್ಚಾ ಕಿಪ್ಗೆನ್ ಅವರ ಮನೆಗೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಇದರ ನಡುವೆ ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ಈ ಬಗ್ಗೆ ಅನೇಕ ಹಂತಗಳಲ್ಲಿ ಚರ್ಚೆ ನಡೆಸಲಾಗುತ್ತಿದ್ದು, ಹಿಂಸಾಚಾರದಲ್ಲಿ ತೊಡಗಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಮಣಿಪುರದಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರವಾಗಿ ಮೈತೇಯಿ ಹಾಗೂ ಕುಕಿ ಸಮುದಾಯದ ನಡುವೆ ಕಳೆದ ಒಂದು ತಿಂಗಳಿನಿಂದ ಹಿಂಸಾಚಾರ ನಡೆಯುತ್ತಲೇ ಇದೆ. ಇದುವರೆಗೆ ಘಟನೆಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬುಧವಾರ ನಡೆದ ಹಿಂಸಾಚಾರದಲ್ಲಿ 9 ಜನರು ಸಾವನ್ನಪ್ಪಿದ್ದಾರೆ.10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.