ಡೈಲಿ ವಾರ್ತೆ: 16 ಜೂನ್ 2023

ಲೈಂಗಿಕ ಕಿರುಕುಳ ಆರೋಪ:ಮಾಜಿ ಡಿಜಿಪಿ ರಾಜೇಶ್ ದಾಸ್ ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಚೆನ್ನೈ: ತಮಿಳುನಾಡಿನ ಮಾಜಿ ಪೊಲೀಸ್ ಮಹಾನಿರ್ದೇಶಕ ರಾಜೇಶ್ ದಾಸ್ ಅವರು ಮಹಿಳಾ ಅಧಿಕಾರಿ ಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ 3 ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯ ಶುಕ್ರವಾರ ವಿಧಿಸಿದೆ.

ಮಹಿಳಾ ಅಧಿಕಾರಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ರಾಜೇಶ್ ದಾಸ್ ಅವರನ್ನು ತಮಿಳುನಾಡಿನ ವಿಲ್ಲುಪುರಂ ನ್ಯಾಯಾಲಯ ಅಪರಾಧಿ ಎಂದು ಪರಿಗಣಿಸಿದ್ದು, 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಫೆ. 2021ರಲ್ಲಿ ಮಹಿಳಾ ಐಪಿಎಸ್ ಅಧಿಕಾರಿಯೊಬ್ಬರು ರಾಜೇಶ್ ದಾಸ್ ವಿರುದ್ಧ ದೂರು ದಾಖಲಿಸಿದ್ದರು.
ಅಂದಿನ ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಭದ್ರತಾ ಕರ್ತವ್ಯಕ್ಕೆ ತೆರಳುವಾಗ ರಾಜೇಶ್ ದಾಸ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಅಂದಿನ ಸರ್ಕಾರ ದಾಸ್ ಅವರನ್ನು ಅಮಾನತು ಮಾಡಿತ್ತು. ಮತ್ತು ಪ್ರಕರಣದ ತನಿಖೆಗೆ ಆರು ಸದಸ್ಯರ ಸಮಿತಿ ರಚನೆ ಮಾಡಿತ್ತು
ಪ್ರಾಸಿಕ್ಯೂಷನ್ ಪೊಲೀಸ್ ಸಿಬ್ಬಂದಿ ಸೇರಿದಂತೆ 68 ಜನರ ಹೇಳಿಕೆಗಳನ್ನು ದಾಖಲಿಸಿದೆ. ರಾಜೇಶ್ ದಾಸ್ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಬಹುದು, ತಕ್ಷಣದ ಜಾಮೀನು ಪಡೆಯಬಹುದು ಎಂದು ಪ್ರಾಸಿಕ್ಯೂಷನ್ ತಂಡದ ಸದಸ್ಯರೊಬ್ಬರು ಹೇಳಿದರು.

ಈ ಘಟನೆ 2021ರಲ್ಲಿ ಚುನಾವಣಾ ವಿಷಯವಾಗಿ ಬದಲಾಗಿತ್ತು ಮತ್ತು ಆಗಿನ ಪ್ರತಿಪಕ್ಷದ ನಾಯಕರಾಗಿದ್ದ ಎಂಕೆ ಸ್ಟಾಲಿನ್ ಅವರು ಅಧಿಕಾರಕ್ಕೆ ಬಂದರೆ, ಸರಿಯಾದ ಕಾನೂನು ಪ್ರಕ್ರಿಯೆ ನಡೆಸಿ, ಶಿಕ್ಷೆ ಕೊಡಿಸುವುದಾಗಿ ಭರವಸೆ ನೀಡಿದ್ದರು.