ಡೈಲಿ ವಾರ್ತೆ:17 ಜೂನ್ 2023

ಮಣಿಪುರ: ಮುಂದುವರೆದ ಹಿಂಸಾಚಾರ – ಪೊಲೀಸರ ಮೇಲೆಯೇ ಗುಂಡಿನ ದಾಳಿ, ಶಸ್ತ್ರಾಸ್ತ್ರ ಧ್ವಂಸ

ಇಂಪಾಲ: ಸಂಘರ್ಷ ಪೀಡಿತ ಪ್ರದೇಶವಾದ ಮಣಿಪುರದಲ್ಲಿ ಶುಕ್ರವಾರ ರಾತ್ರಿ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪೊಲೀಸ್ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದು, ಶನಿವಾರ ಮುಂಜಾನೆಯವರೆಗೂ ಗುಂಡಿನ ದಾಳಿ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾ ಮತ್ತು ಚುರಾಚಂದ್‌ಪುರ್ ಜಿಲ್ಲೆಯ ಕಾಂಗ್ವಾಯ್‌ನಲ್ಲಿ ಗುಂಡಿನ ದಾಳಿ ನಡೆಸಿದ್ದು, ಗುಂಪು ಗುಂಪಾಗಿ ಸೇರಿಕೊಂಡು ಅಲ್ಲಲ್ಲಿ ಬೆಂಕಿ ಹಚ್ಚುವ ವಿದ್ವಂಸಕ ಕೃತ್ಯಗಳು ನಡೆದಿವೆ. ಭಾರತೀಯ ಸಶಸ್ತ್ರ ಪಡೆ, ಅಸ್ಸಾಂ ರೈಫಲ್ಸ್, ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ (RAF) ಮತ್ತು ರಾಜ್ಯ ಪೊಲೀಸರ ಜಂಟಿ ಪಡೆಗಳು ಇಂಪಾಲದ ಪೂರ್ವ ಜಿಲ್ಲೆಯಲ್ಲಿ ಮಧ್ಯರಾತ್ರಿಯವರೆಗೆ ಧ್ವಜ ಮೆರವಣಿಗೆ ಕೈಗೊಂಡಿದ್ದ ಸಂದರ್ಭ ಅಡ್ವಾನ್ಸ್ ಆಸ್ಪತ್ರೆ ಬಳಿಯ ಅರಮನೆ ಕಾಂಪೌಂಡ್‌ನಲ್ಲಿ ಬೆಂಕಿ ಹಚ್ಚುವ ಪ್ರಯತ್ನ ನಡೆದಿದೆ.
ಶುಕ್ರವಾರ ಸಂಜೆ ಸುಮಾರು 1,000 ಜನರ ಗುಂಪು ಸೇರಿಕೊಂಡು ಈ ದುಷ್ಕೃತ್ಯ ಎಸಗಿದ್ದಾರೆ. ಈ ಗುಂಪನ್ನು ಚದುರಿಸುವ ಸಲುವಾಗಿ ಆರ್‌ಎಎಫ್ ಆಶ್ರವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮಣಿಪುರ ವಿಶ್ವವಿದ್ಯಾನಿಲಯದ ಬಳಿ ಗುಂಪೊಂದು ನಿರ್ಮಾಣವಾಗಿದ್ದು, ರಾತ್ರಿ 10:40ರ ಸುಮಾರಿಗೆ 200ರಿಂದ 300 ಮಂದಿ ಸೇರಿಕೊಂಡು ಶಾಸಕರ ಮನೆಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದಾರೆ. ಆರ್‌ಎಎಫ್ ತಂಡವು ಈ ಗುಂಪನ್ನು ಚದುರಿಸುವಲ್ಲಿ ಯಶಸ್ವಿಯಾಗಿದೆ. ಅದೇ ರಾತ್ರಿ ಮತ್ತೊಂದು ಗುಂಪು ಇಂಪಾಲದ ಪಶ್ಚಿಮ ಜಿಲ್ಲೆಯ ಇರಿಂಗ್‌ಬಾಮ್ ಪೊಲೀಸ್ ಠಾಣೆಯ ಶಸ್ತ್ರಾಸ್ತ್ರಗಳನ್ನು ಧ್ವಂಸಗೊಳಿಸಲು ಪ್ರಯತ್ನಿಸಿದೆ. ಸುಮಾರು 300ರಿಂದ 400 ಮಂದಿ ಪೊಲೀಸ್ ಠಾಣೆಯ ಒಳಗೆ ನುಗ್ಗಿದ್ದು, ಆರ್‌ಎಎಫ್ ತಂಡ ಗುಂಪನ್ನು ಚದುರಿಸಿದೆ. ಅಲ್ಲದೇ 200ರಿಂದ 300 ಜನರ ಗುಂಪೊಂದು ಬಿಜೆಪಿ ಕಚೇರಿಗೆ ಸುತ್ತುವರೆದಿದ್ದು, ಸೇನಾ ಪಡೆಯು ಅದನ್ನು ಚದುರಿಸಿದೆ ಎಂದು ಸೇನಾ ಮೂಲಗಳು ತಿಳಿಸಿದೆ.
ಪಶ್ಚಿಮ ಇಂಪಾಲದಲ್ಲಿರುವ ಬಿಜೆಪಿ ಅಧ್ಯಕ್ಷ ಅಧಿಕಾರಿಮಯುಮ್ ಶಾರದಾ ದೇವಿಯವರ ನಿವಾಸವನ್ನೂ ಧ್ವಂಸಗೊಳಿಸಲು ಪ್ರಯತ್ನ ಪಟ್ಟಿದ್ದು, ಅದನ್ನು ಸೇನೆ ಮತ್ತು ಆರ್‌ಎಎಫ್ ತಡೆದಿದೆ. 1,200 ಜನರ ಗುಂಪೊಂದು ಕೇಂದ್ರ ಸಚಿವ ಆರ್‌ಕೆ ರಂಜನ್ ಸಿಂಗ್ ಅವರ ಮನೆಯನ್ನು ಸುಟ್ಟುಹಾಕಿದ ಬಳಿಕ ಈ ಘಟನೆ ನಡೆದಿದೆ.
ಕಳೆದ ಕೆಲವು ದಿನಗಳಿಂದ ಮಣಿಪುರ ಕೋಮು ಸಂಘರ್ಷವು ತೀವ್ರ ಸ್ವರೂಪವನ್ನು ಪಡೆದುಕೊಂಡಿದ್ದು, ರಾಜಕಾರಣಿಗಳ ಮನೆ ಹಾಗೂ ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡುವ ಗುರಿಯನ್ನು ಕೆಲ ಗುಂಪುಗಳು ಹೊಂದಿವೆ. ಈ ಹಿನ್ನೆಲೆ ಅಲ್ಲಲ್ಲಿ ಬೆಂಕಿ ಹಚ್ಚುವ ಕಾರ್ಯಗಳು ನಡೆಯುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಕೇಂದ್ರ ಸರ್ಕಾರ ಶ್ರಮಿಸಬೇಕಿದೆ.