ಡೈಲಿ ವಾರ್ತೆ:17 ಜೂನ್ 2023

ಶತಾಯುಷಿ ಗೋಪಾಡಿ ಪರಮೇಶ್ವರ ಭಟ್ಟರಿಗೆ ಕೋಟೇಶ್ವರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ನಿಂದ ಸನ್ಮಾನ

ಕೋಟೇಶ್ವರ : ಪ್ರತಿಷ್ಠಿತ ಕೋಟೇಶ್ವರ ಮಾಗಣೆಯ ಹಿರಿಯ ಪುರೋಹಿತರಾಗಿ ಸೇವೆ ಸಲ್ಲಿಸಿ, ಇದೀಗ ವಿಶ್ರಾಂತ ಜೀವನ ನಡೆಸುತ್ತಿರುವ ಗೋಪಾಡಿಯ ನಿವಾಸಿ, ಶತಾಯುಷಿ ವೇದಮೂರ್ತಿ ಶ್ರೀ ಪರಮೇಶ್ವರ ಭಟ್ಟರನ್ನು ಕೋಟೇಶ್ವರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ವತಿಯಿಂದ ಜೂನ್ 16ರ ಶುಕ್ರವಾರ ಗೋಪಾಡಿಯ ಅವರ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಗೋಪಾಡಿಯ ಶ್ರೀ ಕಾಂತೇಶ್ವರ ಸನ್ನಿಧಿಯಲ್ಲಿ ಇತ್ತೀಚೆಗೆ ಅವರ ಶತಮಾನ ಶಾಂತಿಯನ್ನು ನಡೆಸಲಾಗಿತ್ತು.

ವಲಯ ಗೌರವ ಸಲಹೆಗಾರ ವೈ. ಎನ್. ವೆಂಕಟೇಶಮೂರ್ತಿ ಭಟ್ ಸ್ವಾಗತಿಸಿ, ಶತಾಯುಷಿ ವಿಪ್ರೋತ್ತಮರನ್ನು ಗೌರವಿಸಿ, ಆಶೀರ್ವಾದ ಪಡೆಯುವ ಅವಕಾಶ ಲಭಿಸಿರುವುದು ವಲಯ ಸದಸ್ಯರ ಪುಣ್ಯ ವಿಶೇಷ. ದೇವರು ಭಟ್ಟರಿಗೆ ಚೈತನ್ಯದಾಯಕ ಜೀವನವನ್ನು ಕರುಣಿಸಲಿ ಎಂದು ಹಾರೈಸಿದರು.
ವಲಯಾಧ್ಯಕ್ಷ ಬಿ. ವಾದಿರಾಜ ಹೆಬ್ಬಾರ್ ಮಾತನಾಡಿ, ಶತಾಯುಷಿಯಾಗಿ ಆರೋಗ್ಯವಂತರಾಗಿ ಅವರು ನಮ್ಮೊಡನಿರುವುದು ವಲಯಕ್ಕೊಂದು ಹೆಮ್ಮೆ ಎಂದರು.

ಕೆ. ಜಿ. ವೈದ್ಯ ಶುಭ ಹಾರೈಸಿ, ಹಿರಿಯರ ಆಶೀರ್ವಾದ ಪಡೆಯುವುದು ಶ್ರೇಯಸ್ಕರ. ಪರಮೇಶ್ವರ ಭಟ್ಟರು ಹೀಗೇ ಆರೋಗ್ಯವಂತರಾಗಿ ನೆಮ್ಮದಿಯ ಜೀವನ ಹೊಂದಲಿ ಎಂದರು.

ಸನ್ಮಾನಿತ ಪರಮೇಶ್ವರ ಭಟ್ಟರು ವಿಪ್ರ ಸಂಘಟನೆ ಬಲಗೊಳ್ಳಲಿ, ಲೋಕ ಕಲ್ಯಾಣ ಉಂಟಾಗಲಿ ಎಂದು ಹಾರೈಸಿ ಆಶೀರ್ವದಿಸಿದರು.

ಪರಮೇಶ್ವರ ಭಟ್ಟರ ಪುತ್ರರಾದ ಶ್ರೀನಿವಾಸ ಭಟ್, ಲಕ್ಷ್ಮಣ ಭಟ್, ಮಮತಾ, ಕುಟುಂಬ ಸದಸ್ಯರು ಇದ್ದರು.

ಬ್ರಾಹ್ಮಣ ಪರಿಷತ್ ನ ಗೌರವಾಧ್ಯಕ್ಷ ಪಿ. ಗಣಪಯ್ಯ ಚಡಗ, ಉಪಾಧ್ಯಕ್ಷ ರಾಘವೇಂದ್ರ ಹತ್ವಾರ್, ಯುವ ವಿಪ್ರ ವೇದಿಕೆ ಅಧ್ಯಕ್ಷ ನಾಗರಾಜ ಅಡಿಗ, ವಾದಿರಾಜ ಅಡಿಗ, ಚಂದ್ರಿಕಾ ಅಡಿಗ, ವೆಂಕಟೇಶ ಅರಸ್, ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಹೆಬ್ಬಾರ್, ಕಾರ್ಯದರ್ಶಿ ನಾಗರತ್ನ ಉಡುಪ ಉಪಸ್ಥಿತರಿದ್ದರು.

ಕಾರ್ಯದರ್ಶಿ ಎಸ್. ನಾಗೇಂದ್ರ ಬಿಳಿಯ ವಂದಿಸಿದರು.