ಡೈಲಿ ವಾರ್ತೆ: 18 ಜೂನ್ 2023

ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಗೊಂದಲಗಲು ಉಂಟು ಮಾಡಿದೆ. ತುಂಗಪ್ಪ ಬಂಗೇರ

ಬಂಟ್ವಾಳ : ರಾಜ್ಯ ಕಾಂಗ್ರೆಸ್ ನೀಡಿದ ಉಚಿತ ಭಾಗ್ಯಗಳು ಗ್ರಾಮೀಣ ಭಾಗದಲ್ಲಿ ಸಾಕಷ್ಟು ಗೊಂದಲ ಉಂಟುಮಾಡಿದ್ದಲ್ಲದೆ, ಸರ್ವರಿಗೂ ಸಿಗುವ ರೀತಿಯಲ್ಲಿ ಭಾಗ್ಯಗಳನ್ನು ಜಾರಿ ಮಾಡುವಂತೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ ತಿಳಿಸಿದರು.

ಅವರು ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ನೀಡಿದ ಉಚಿತ ಭಾಗ್ಯಗಳ ಭರವಸೆಯನ್ನು ಯಥಾವತ್ತಾಗಿ ಜಾರಿ ಮಾಡದೆ ನೀಡದೆ ವಂಚನೆ ಮಾಡಿದೆ ಎಂದು ಆರೋಪಿಸಿದರು.

ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸರಕಾರಿ ಬಸ್ ಸಂಚಾರ ವಿಲ್ಲದೆ ಪ್ರಯಾಣ ಬೆಳೆಸುವ ಮಹಿಳೆಯರು ಸರಕಾರದ ಉಚಿತ ಬಸ್ ಪ್ರಯಾಣದ ಭಾಗ್ಯದಿಂದ ವಂಚಿರಾಗಿದ್ದಾರೆ ಎಂದರು.

ಸರಕಾರದ ಉಚಿತ ಪ್ರಯಾಣದ ಭಾಗ್ಯದಿಂದಾಗಿ ಚಾಲನೆಯನ್ನೇ ನಂಬಿ ಬದುಕು ಸಾಗಿಸುವ ಖಾಸಗಿ ಚಾಲಕರಿಗೆ ಅನ್ಯಾಯವಾಗಿದೆ. ಅಟೋರಿಕ್ಷಾ, ಟೆಂಪೋ, ಕಾರು ಚಾಲಕರು ಬಾಡಿಗೆಯಿಲ್ಲದೆ ಸಂಕಷ್ಟದ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.ಹಾಗಾಗಿ ಅವರಿಗೆ ಮಾಸಿಕ ಪರಿಹಾರ ಅಥವಾ ಬದಲಿ ವ್ಯವಸ್ಥೆಯನ್ನು ಸರಕಾರ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ವಿದ್ಯುತ್ ಬಿಲ್ ಬಗ್ಗೆ ಗೊಂದಲ ಇದೆ, ಅಧಿಕಾರಿಗಳು ಜನರಿಗೆ ಸರಿಯಾದ ಮಾಹಿತಿ ನೀಡಬೇಕಾಗಿದೆ. ಉಚಿತ ಬಸ್ ಪ್ರಯಾಣದಿಂದ ರಿಕ್ಷಾ ಸಹಿತ ಇತರ ವಾಹನಗಳ ಚಾಲಕರ ಬದುಕಿಗೆ ತೊಂದರೆಯಾಗಿದ್ದು, ಶೀಘ್ರವಾಗಿ ಅವರ ಸಮಸ್ಯೆಗೆ ಸ್ಪಂದನೆ ನೀಡದೆ ಇದ್ದಲ್ಲಿ ರಸ್ತೆಯಲ್ಲಿ ಎಲ್ಲಾ ವಾಹಕಗಳನ್ನು ನಿಲ್ಲಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

ಅಟೋ ಚಾಲಕ ಮಾಲಕ ಸಂಘದ ಸಂಘಟನಾ ಕಾರ್ಯದರ್ಶಿ ವಸಂತ ಮಣಿಹಳ್ಳ, ಟೆಂಪೋ ಚಾಲಕ ಮಾಲಕರ ಸಂಘದ ಪ್ರಮುಖ ಸದಾನಂದ ನಾವೂರ, ಕಾರು ವಾಹನ ಚಾಲಕರ ಮಾಜಿ ಅಧ್ಯಕ್ಷ ವಿಠಲ ರೈ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.