ಡೈಲಿ ವಾರ್ತೆ: 24 ಜೂನ್ 2023
ಬಿಜೆಪಿ ಅವಧಿಯಲ್ಲಿ ವಾಸ್ತು ಸರಿಯಿಲ್ಲ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರ ಮುಚ್ಚಿದ್ದ ಬಾಗಿಲು ತೆರೆಸಿ ಎಂಟ್ರಿ ಕೊಟ್ಟ ಸಿಎಂ ಸಿದ್ದರಾಮಯ್ಯ!
ಬೆಂಗಳೂರು: ವಾಸ್ತು ಸರಿಯಿಲ್ಲ ಎನ್ನುವ ಕಾರಣದಿಂದ ಬಂದ್ ಮಾಡಲಾಗಿದ್ದ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯ ಪಶ್ಚಿಮ ದ್ವಾರದ ಬೀಗ ತೆರೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಳಗೆ ಪ್ರವೇಶಿಸಿದರು.
ಅನ್ನಭಾಗ್ಯ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ಪಶ್ಚಿಮ ದ್ವಾರ ಬಂದ್ ಆಗಿರುವುದನ್ನು ಗಮನಿಸಿದರು.
ವಾಸ್ತು ಕಾರಣದಿಂದ ಬಂದ್ ಮಾಡಲಾಗಿದೆ ಎನ್ನುವ ಉತ್ತರ ಅಧಿಕಾರಿಗಳಿಂದ ಬಂತು. ಬಳಿಕ ಮುಖ್ಯಮಂತ್ರಿಗಳು ಆ ದ್ವಾರದಲ್ಲೇ ನಿಂತರು. ದಕ್ಷಿಣ ದ್ವಾರದಿಂದ ಸಿಬ್ಬಂದಿ ಒಳಗೆ ಹೋಗಿ ಪಶ್ಚಿಮದ ದ್ವಾರವನ್ನು ತೆರೆದ ಬಳಿಕ ಅದೇ ದ್ವಾರದ ಮೂಲಕವೇ ತಮ್ಮ ಕಚೇರಿ ಪ್ರವೇಶಿಸಿದರು.
ಆರೋಗ್ಯಕರ ಮನಸ್ಸು, ಸ್ವಚ್ಛ ಹೃದಯ, ಜನಪರ ಕಾಳಜಿ, ಒಳ್ಳೆ ಗಾಳಿ-ಬೆಳಕು ಬರುವಂತಿದ್ದರೆ ಅದೇ ಉತ್ತಮ ವಾಸ್ತು ಎಂದು ಅಧಿಕಾರಿಗಳ ಜೊತೆ ಸಿಎಂ ತಮ್ಮ ನಿಲುವನ್ನು ಹಂಚಿಕೊಂಡರು.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ, ಜನರ ಬಗ್ಗೆ ಕಾಳಜಿ, ನಡತೆಯಲ್ಲಿ ಪ್ರಾಮಾಣಿಕತೆ, ಕರ್ತವ್ಯದಲ್ಲಿ ನಿಷ್ಠೆ ನಮ್ಮೊಳಗಿದ್ದರೆ ದಿಕ್ಕು, ಘಳಿಗೆ, ಮುಹೂರ್ತ ಎಲ್ಲವೂ ನಗಣ್ಯ. ವಾಸ್ತುದೋಷದ ಕಾರಣಕ್ಕಾಗಿ ಕಳೆದ ಐದು ವರ್ಷಗಳಿಂದ ಮುಚ್ಚಲಾಗಿದ್ದ ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರವನ್ನು ತೆರೆಸಿ, ಅದೇ ಬಾಗಿಲಿನಿಂದ ಕಚೇರಿ ಪ್ರವೇಶ ಮಾಡಿದೆ. ಕೊಠಡಿಯೊಳಗೆ ಒಳ್ಳೆಯ ಗಾಳಿ, ಬೆಳಕು ಬರುವಂತಿದ್ದರೆ ಅದಕ್ಕಿಂತ ಉತ್ತಮ ವಾಸ್ತು ಬೇರಿಲ್ಲ. ನಡೆ – ನುಡಿ ಶುದ್ಧವಿದ್ದರೆ ಮತ್ತೆಲ್ಲವೂ ಶುಭದಾಯಕವಾಗಿರಲಿದೆ. ಜನತೆಯ ಆಶೀರ್ವಾದ ಇರಲಿ ಎಂದು ಆಶಿಸಿದ್ದಾರೆ.
ಬಿಜೆಪಿ ಅವಧಿಯಲ್ಲಿ ವಾಸ್ತು ಸರಿಯಿಲ್ಲ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳ ಕಚೇರಿಯ ದಕ್ಷಿಣ ದ್ವಾರ ಮುಚ್ಚಿಸಲಾಗಿತ್ತು. ಈಗ ಬಾಗಿಲನ್ನು ತೆಗೆಸಿ ದಕ್ಷಿಣ ಬಾಗಿಲಿನಿಂದಲೇ ತಮ್ಮ ಕಚೇರಿಗೆ ಸಿಎಂ ಸಿದ್ದರಾಮಯ್ಯ ಎಂಟ್ರಿ ಕೊಟ್ಟಿದ್ದಾರೆ.
ಚಾಮರಾಜನಗರ ಕಥೆ ನೆನಪಿಸಿದ ಸಿದ್ದು
ಚಾಮರಾಜನಗರಕ್ಕೆ ಭೇಟಿ ಕೊಟ್ಟ ಮುಖ್ಯಮಂತ್ರಿಗಳು,ಉನ್ನತ ಅಧಿಕಾರಿಗಳು ಆರು ತಿಂಗಳಿನಲ್ಲಿ ಅಧಿಕಾರ ಕಳೆದುಕೊಳ್ಳುತ್ತಾರೆನ್ನುವ ನಂಬಿಕೆ ಬಹು ಹಿಂದಿನ ಕಾಲದಿಂದಲೂ ಇತ್ತು. ಸಮಾಜವಾದಿ ತತ್ವಪಾಲಕರಾಗಿದ್ದ ಜೆ.ಹೆಚ್.ಪಟೇಲ್ ಆದಿಯಾಗಿ ಬಹುತೇಕ ಮುಖ್ಯಮಂತ್ರಿಗಳು ಚಾಮರಾಜನಗರ ಪಟ್ಟಣಕ್ಕೆ ಭೇಟಿ ನೀಡುವುದನ್ನು ತಪ್ಪಿಸಿದ್ದದ್ದು ಇದೇ ಕಾರಣಕ್ಕಾಗಿತ್ತು. ಹೆಚ್.ಡಿ. ಕುಮಾರಸ್ವಾಮಿ ತಮ್ಮ ಅಧಿಕಾರಾವಧಿಯ ಕಡೆ ದಿನಗಳಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದರು. ಕಾಕತಾಳೀಯವೆನ್ನುವಂತೆ ಅವರು ಮತ್ತೆ ಅಧಿಕಾರದಲ್ಲಿ ಮುಂದುವರಿಯಲಿಲ್ಲ.
ಆದರೆ ಈ ಮೂಢನಂಬಿಕೆಯನ್ನು ಈ ಹಿಂದೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಅವರು ಅಲ್ಲಗಳೆದು ಚಾಮರಾಜನಗರಕ್ಕೆ ಭೇಟಿ ಕೊಟ್ಟಿದ್ದರು. ಅದಾದ ಬಳಿಕ ಅನೇಕ ಬಾರಿ ಈ ಜಿಲ್ಲೆಗೆ ತೆರಳಿದ್ದರು. ಕೊನೆಗೆ ಪೂರ್ಣಾವಧಿ ಆಡಳಿತ ಕೂಡ ನಡೆಸಿದರು. ಸಿದ್ದರಾಮಯ್ಯ ಅವರು ತಮ್ಮ ಜೀವನದುದ್ದಕ್ಕೂ ಮೌಢ್ಯ, ಮೂಢನಂಬಿಕೆ, ಕಂದಾಚಾರಗಳನ್ನು ವಿರೋಧಿಸುತ್ತಾ ಬಂದಿದ್ದಾರೆ. ಅದಕ್ಕೆ ಇವೆರಡು ನಿದರ್ಶನಗಳಿವೆ.