ಡೈಲಿ ವಾರ್ತೆ:26 ಜೂನ್ 2023
ಮೀನು ಹಿಡಿಯಲು ಹೋಗಿ ಕೆರೆಯಲ್ಲಿ ತೆಪ್ಪ ಮಗುಚಿ ಓರ್ವ ನೀರುಪಾಲು
ಮುದ್ದೇಬಿಹಾಳ: ಮೀನು ತಿನ್ನುವ ಆಸೆಯಿಂದ ಸ್ನೇಹಿತನ ಬಲವಂತದ ಮೇರೆಗೆ ಆತನ ಜೊತೆ
ಕೆರೆಯಲ್ಲಿ ಮೀನು ಹಿಡಿಯಲು ಹೋದಾಗ ತೆಪ್ಪ ಮಗುಚಿ 17 ವರ್ಷದ ಅಪ್ರಾಪ್ತ ಮಂಜುನಾಥ ಶಿವಪ್ಪ ಚಲವಾದಿ ನೀರುಪಾಲಾಗಿರುವ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ತಾರನಾಳ ಕೆರೆಯಲ್ಲಿ ನಡೆದಿದೆ.
ಸೋಮವಾರ ಬೆಳಿಗ್ಗೆ ಗ್ರಾಮದ ಯುವಕರು ಕೆರೆಗಿಳಿದು ಹುಡುಕಾಟ ನಡೆಸಿದಾಗ ಮೀನಿನ ಬಲೆಗೆ ಸಿಕ್ಕಿಹಾಕಿಕೊಂಡಿದ್ದ ಶವ ಪತ್ತೆ ಆಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕರಿಬ್ಬರು ಮೀನು ತಿನ್ನುವ ಆಸೆಯಿಂದ ಮನೆಯವರಿಗೆ ತಿಳಿಸದೆ ಕೆರೆಯಲ್ಲಿ ಬಲೆ ಹಾಕಿ ಮೀನು ಹಿಡಿಯಲು ಭಾನುವಾರ ಸಂಜೆ ಕತ್ತಲಾದ ಮೇಲೆ ಹೋಗಿದ್ದರು ಆಗ ತೆಪ್ಪ ಮಗುಚಿ ಯುವಕರು ಮುಳುಗುತ್ತಿದ್ದರು. ಇದನ್ನು ಗಮನಿಸಿದ ದಾರಿಹೋಕರು ಓರ್ವನನ್ನು ರಕ್ಷಿಸಿದ್ದರು.
ರಕ್ಷಿಸಲ್ಪಟ್ಟ ಯುವಕ ಭೀತಿಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದ. ವಿಷಯ ತಿಳಿದು ರಾತ್ರಿಯೇ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕತ್ತಲೆಯಲ್ಲೇ ಕಾರ್ಯಾಚರಣೆ ನಡೆಸಿದರೂ ಶವ ಪತ್ತೆ ಆಗಿರಲ್ಲ. ಸೋಮವಾರ ಬೆಳಿಗ್ಗೆಯೂ ಮತ್ತೇ ಕಾರ್ಯಾಚರಣೆ ಪ್ರಾರಂಭಗೊಂಡಿತ್ತಾದರು
ಅಗ್ನಿಶಾಮಕ ದಳದ ಸಿಬ್ಬಂದಿ ತಮ್ಮಲ್ಲಿರುವ ಸೀಮಿತ ಸಂಪನ್ಮೂಲ, ಉಪಕರಣ ಬಳಸಿ ಶವ ಹೊರತೆಗೆಯುವ ಕಾರ್ಯಾಚರಣೆಗೆ ಮುಂದಾಗಿದ್ದರು. ಕೆರೆಯಲ್ಲಿ ಭಾರೀ ಪ್ರಮಾಣದ ಹೂಳು ತುಂಬಿಕೊಂಡಿದ್ದರಿಂದ ಮತ್ತು ಅಗ್ನಿಶಾಮಕದವರ ಬಳಿ ಕೆರೆಯಲ್ಲಿ ಕಾರ್ಯಾಚರಣೆಗೆ ಬೋಟ್ ಸೇರಿದಂತೆ ಅಗತ್ಯವಿರುವ ಸಲಕರಣೆಗಳು ಇಲ್ಲದ ಕಾರಣ ಶವ ಪತ್ತೆ ವಿಳಂಬವಾಗತೊಡಗಿತ್ತು. ಹೀಗಾಗಿ ಅಸಹಾಯಕರಾಗಿ ಕೆರೆ ಬಳಿಯೇ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಸಿಬ್ಬಂದಿಗೆ ಬಂದೊದಗಿತ್ತು. ಕೊನೆಗೆ ಗ್ರಾಮದ ಯುವಕರು ಧೈರ್ಯ ಮಾಡಿ ಕೆರೆಗಿಳಿದಾಗ ಶವ ಸಿಕ್ಕಿದೆ.