ಡೈಲಿ ವಾರ್ತೆ:26 ಜೂನ್ 2023
ಲೋಕಾರ್ಪಣೆಗೊಂಡ ಶ್ರೀ ಶಾಂಭವಿ ವಿದ್ಯಾದಾಯಿನೀ ಶಾಲೆ ಗಿಳಿಯಾರು ಕೋಟ ಇದರ ಎಲ್ ಕೆ ಜಿ ತರಗತಿ: ಸ್ಥಳೀಯ ಆಡಳಿತ ವರ್ಗವನ್ನು ದೂರ ಇಟ್ಟ ವಿದ್ಯಾದ್ಯಾಯಿನೀ ಆಡಳಿತ ಸಂಸ್ಥೆಯ ಬಗ್ಗೆ ಅಸಮಾಧಾನ
ಕೋಟ: ಕೋಟ ಗಿಳಿಯಾರಿನ ಶ್ರೀ ಶಾಂಭವಿ ವಿದ್ಯಾದಾಯಿನೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಜೂ. 26 ರಂದು ಪೂರ್ವ ಪ್ರಾಥಮಿಕ ತರಗತಿಗಳು (ಎಲ್ ಕೆ ಜಿ) ಪ್ರಾರಂಭವಾಗಿವೆ. ಇಲ್ಲಿನ ವಿದ್ಯಾಭಿಮಾನಿಗಳು ಮತ್ತು ಶಾಲಾಡಳಿತ ಮಂಡಳಿಯ ಬಹು ಸಮಯದ ಕನಸು ಈ ಮೂಲಕ ನನಸಾದಂತಾಗಿದೆ.
ಈ ಸಂತೋಷದೊಂದಿಗೆ ಇಂತಹ ಐತಿಹಾಸಿಕ ಕಾರ್ಯಕ್ರಮದಲ್ಲಿ ಸ್ಥಳೀಯಾಡಳಿತವನ್ನೇ ಕಡೆಗಣಿಸಿದ ಬಗ್ಗೆ ಅಸಮಾಧಾನದ ಅಲೆಯೂ ಎದ್ದಿದೆ.
ಎಲ್ ಕೆ ಜಿ ತರಗತಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಸ್ಥಳೀಯ ಪಂಚಾಯಿತಿಗೆ ಯಾವುದೇ ಮಾಹಿತಿ ನೀಡಲಿಲ್ಲ. ಬ್ರಹ್ಮಾವರ ಶಿಕ್ಷಣ ಕ್ಷೇತ್ರಕ್ಕೊಳಪಡುವ ಈ ಅನುದಾನಿತ ಶಾಲಾ ಮಂಡಳಿಯು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ನೀಡಲಿಲ್ಲ ಎನ್ನಲಾಗಿದೆ. ಅವರ ಹಾಗೂ ಯಾವುದೇ ಅಧಿಕಾರಿಗಳ ಗಮನಕ್ಕೆ ಸಹ ತರದೆ ತರಗತಿಗಳನ್ನು ಪ್ರಾರಂಭಿಸಿರುತ್ತಾರೆ.
ಕೇವಲ ಉದ್ಯಮಿಗಳನ್ನು ಹಾಗೂ ಸಾರ್ವಜನಿಕರನ್ನು ಮಾತ್ರ ಆಹ್ವಾನಿಸಿ ಶಾಲೆ ಪ್ರಾರಂಭಿಸಿರುವುದು ಸಂಸ್ಥೆಯ ಆಡಳಿತ ವರ್ಗದ ತಾರತಮ್ಯವಾಗಿದೆ ಎಂಬ ಆರೋಪ ಇದೀಗ ಕೇಳಿಬಂದಿದೆ.
*ಅಜಿತ್ ದೇವಾಡಿಗ ಅಧ್ಯಕ್ಷರು ಗ್ರಾಮ ಪಂಚಾಯತ್ ಕೋಟ*:
ನಾನು ಶ್ರೀ ಶಾಂಭವಿ ವಿದ್ಯಾದಾಯಿನೀ ಅನುದಾನಿತ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವೆ. ಹಲವು ಕಾರ್ಯಕ್ರಮಗಳು ಶ್ರೀ ಶಾಂಭವಿ ಶಾಲೆಯಲ್ಲಿ ನಡೆಯುತ್ತಿದ್ದು ಯಾವುದೇ ಮಾಹಿತಿ ನಮ್ಮ ಕೋಟ ಪಂಚಾಯಿತಿಗೆ ಕೊಡದೆ ಇರುವುದು ಕಂಡುಬಂದಿದೆ.
ಅಲ್ಲದೆ ಜೂ. 26 ರಂದು ಪ್ರಾರಂಭಗೊಂಡ ಎಲ್ ಕೆ ಜಿ ತರಗತಿಗಳ ಉದ್ಘಾಟನಾ ಸಮಾರಂಭದ ಬಗ್ಗೆ ಸಹ ಮಾಹಿತಿ ನಮಗೆ ಇರುವುದಿಲ್ಲ.
ಶಾಂಭವಿ ವಿದ್ಯಾ ಸಂಸ್ಥೆಯ ಆಡಳಿತ ವರ್ಗವು ಬೇಜವಾಬ್ದಾರಿಯಿಂದ ವರ್ತಿಸುವುದು ಸರಿಯಲ್ಲ. ಶಾಲೆಯ ಸರ್ವತೋಮುಖ ಅಭಿವೃದ್ಧಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ನ ಜವಾಬ್ದಾರಿ ಸಾಕಷ್ಟಿರುತ್ತದೆ. ಇದನ್ನು ಶಾಲಾಡಳಿತ ಮಂಡಳಿ ಮರೆಯಬಾರದು.
*ರಂಗನಾಥ್ ಕ್ಷೇತ್ರ ಶಿಕ್ಷಣಾಧಿಕಾರಿ*
ಶ್ರೀ ಶಾಂಭವಿ ವಿದ್ಯಾದಾಯಿನೀ ಅನುದಾನಿತ ಶಾಲೆ ಗಿಳಿಯಾರು ಕೋಟ ಇದರ ಎಲ್ ಕೆ ಜಿ ತರಗತಿ ಪ್ರಾರಂಭಗೊಂಡ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಅಲ್ಲದೆ ಹೆಚ್ಚಿನ ಅನುದಾನಿತ ಶಾಲೆಯ ಆಡಳಿತ ಮಂಡಳಿಯವರು ಇಂತಹ ಸಂದರ್ಭಗಳಲ್ಲಿ ಕೇವಲ ದಾನಿಗಳನ್ನು ಮಾತ್ರ ಕರೆಸುತ್ತಾರೆ. ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಆದರೆ, ಇದು ಸರಿಯಾದ ಕ್ರಮವಲ್ಲ.
ಕೆ. ರಾಜಾರಾಮ ಐತಾಳ್
ಅಧ್ಯಕ್ಷರು ಶಾಲಾ ಆಡಳಿತ ಮಂಡಳಿ
ಶ್ರೀ ಶಾಂಭವಿ ವಿದ್ಯಾದಾಯಿನಿ ಅನುದಾನಿತ ಶಾಲೆಯ ನಮ್ಮ ಆಡಳಿತ ಮಂಡಳಿಯಿಂದ ಯಾವುದೇ ತಾರತಮ್ಯ ಮಾಡಿಲ್ಲ. ಇದು ಸರಕಾರಿ ಕಾರ್ಯಕ್ರಮ ಅಲ್ಲ ಅಲ್ಲದೆ ನಮ್ಮ ಅನುದಾನಿತ ಶಾಲೆಗೆ ಸರಕಾರದಿಂದ 4 ಜನ ಶಿಕ್ಷಕರಿಗೆ ಸಂಬಳ ಹಾಗೂ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಅಕ್ಷರ ದಾಸೋಹ ಯೋಜನೆ ಮಾತ್ರ ಸಿಗುತ್ತದೆ ಅದು ಬಿಟ್ಟು ಸರ್ಕಾರದಿಂದ ಯಾವುದೇ ಅನುದಾನ ಸಿಗುವುದಿಲ್ಲ.