ಡೈಲಿ ವಾರ್ತೆ:28 ಜೂನ್ 2023

ಕೃಷಿ ಇಲಾಖೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ರೇಡ್: 2 ಆಮೆಗಳು ಪತ್ತೆ!

ಬಾಗಲಕೋಟೆ: ಇಲ್ಲಿನ ಕೃಷಿ ಇಲಾಖೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆದಿದ್ದು, ಎರಡು ಸಾಕು ಆಮೆಗಳು ಪತ್ತೆಯಾಗಿವೆ.

ಬಾಗಲಕೋಟೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಹಾಗೂ ಸಹಾಯಕ ನಿರ್ದೇಶಕ ಕೃಷ್ಣಾ ಶಿರೂರು ಅವರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ವಿದ್ಯಾಗಿರಿಯ ಅಕ್ಕಿಮರಡಿ ಬಡಾವಣೆಯಲ್ಲಿರುವ ಚೇತನಾ ಪಾಟೀಲ್ ಹಾಗೂ ವಿದ್ಯಾಗಿರಿಯ 18ನೇ ಕ್ರಾಸ್‌ನಲ್ಲಿರುವ ಕೃಷ್ಣಾ ಶಿರೂರು ಅವರ ಮನೆಗಳ ಮೇಲೆ ಲೋಕಾಯುಕ್ತ ಡಿಎಸ್ಪಿ ಪುಷ್ಪಲತಾ ನೇತೃತ್ವದ ತಂಡ ದಾಳಿ ನಡೆಸಿದೆ.

ಈ ವೇಳೆ ಚೇತನಾ ಪಾಟೀಲ್ ಅವರ ಮನೆಯಲ್ಲಿ 2 ಸಾಕು ಆಮೆಗಳು ಪತ್ತೆಯಾಗಿವೆ. ಆಮೆಗಳನ್ನ ಮನೆಯಲ್ಲಿ ಸಾಕಿದ್ದೇಕೆ ಎಂಬ ಕುತೂಹಲ ವ್ಯಕ್ತಪಡಿಸಿರುವ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳನ್ನೂ ಕರೆಸಿ ಪರಿಶೀಲಿಸಲಾಗುತ್ತಿದೆ. ಇದೇ ವೇಳೆ ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಬಾಗಲಕೋಟೆ ವಿದ್ಯಾಗಿರಿಯ ಅಕ್ಕಿಮರಡಿ ಬಡಾವಣೆಯಲ್ಲಿರುವ ಮನೆಯಲ್ಲಿ ಶೋಧ ಮುಂದುವರಿದಿದ್ದು, ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬುಧವಾರ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್‌ ನೀಡಿದ್ದಾರೆ. ಬೆಂಗಳೂರಿನ ಕೆಆರ್‌ಪುರಂ ತಹಶೀಲ್ದಾರ್‌ ಅಜಿತ್‌ ರೈ ಮನೆ ಸೇರಿ 10 ಕಡೆ ಲೋಕಾಯುಕ್ತ ದಾಳಿ ನಡೆಸಿತು. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಮನೆ, ಕಚೇರಿ ಸೇರಿದಂತೆ 10 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ 40 ಲಕ್ಷ ರೂ. ನಗದು ಸೇರಿದಂತೆ ಅನೇಕ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಹಲವೆಡೆ ದಾಳಿ ನಡೆದಿದ್ದು, ಅಧಿಕಾರಿಗಳಿಂದ ಶೋಧ ಮುಂದುವರಿದಿದೆ.