ಡೈಲಿ ವಾರ್ತೆ: 28 ಜೂನ್ 2023

ಬಂಟ್ವಾಳ ; ಅಕ್ಷರ ದಾಸೋಹ ಸಿಬ್ಬಂದಿ ವಜಾ, ಎಐಸಿಸಿಟಿಯು ಪ್ರತಿಭಟನೆ. ಅನಿರ್ಧಿಷ್ಟಾವಧಿ ಮುಷ್ಕರದ ಎಚ್ಚರಿಕೆ, ಎಂ.ರಾಮಣ್ಣ ವಿಟ್ಲ

ಬಂಟ್ವಾಳ : ರಾಜಕೀಯ ಪ್ರೇರಿತವಾಗಿ ಕೆಲಸದಿಂದ ವಜಾಗೊಳಿಸಿದ ಅಕ್ಷರ ದಾಸೋಹ ಸಿಬ್ಬಂದಿ ಯಶೋಧ ಅವರನ್ನು ಜುಲೈ 10 ರೊಳಗೆ ಮರು ನೇಮಕಗೊಳಿಸದಿದ್ದಲ್ಲಿ ಬಂಟ್ವಾಳ ತಾಲೂಕು ಕಚೇರಿ ಮುಂಭಾಗದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಐಸಿಸಿಟಿಯು ಮುಖಂಡ ಎ. ರಾಮಣ್ಣ ವಿಟ್ಲ ಎಚ್ಚರಿಸಿದರು.

ಸರಕಾರದ ನಿಯಮಾನುಸಾರ ಆಯ್ಕೆಯಾಗಿ ಉಳಿ ಗ್ರಾಮದ ಉಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ನೌಕರರಾಗಿ ಕೆಲಸ ಮಾಡುತ್ತಿದ್ದ ಯಶೋಧ ಕೋಂ ಮಹಾಬಲ ಪೂಜಾರಿ ಅವರನ್ನು ರಾಜಕೀಯ ಪ್ರೇರಿತವಾಗಿ ವಜಾ ಮಾಡಿರುವ ಪ್ರಕರಣ ಖಂಡಿಸಿ ಮಂಗಳವಾರ ಬಿ ಸಿ ರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅವರು ಯಶೋದಾ ಅವರು ಉಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 20 ವರ್ಷಗಳಿಂದ ಅಡುಗೆ ಸಿಬ್ಬಂದಿಯಾಗಿ ಸರಕಾರದ ನಿಯಮಾನುಸಾರವಾಗಿ ಆಯ್ಕೆಯಾಗಿ ಬಿಸಿಯೂಟ ನೌಕರರಾಗಿ ಕೆಲಸವನ್ನು ಮಾಡಿಕೊಂಡು ಬಂದಿರುತ್ತಾರೆ.

2023-24ನೇ ಸಾಲಿನಲ್ಲಿ ಮೇ 30 ಹಾಗೂ 31 ರಂದು ಎಂದಿನಂತೆ ಕೆಲಸಕ್ಕೆ ಅವರು ಹಾಜರಾಗಿರುತ್ತಾರೆ, ಮೇ 31 ರಂದು ಮಧ್ಯಾಹ್ನ ಉಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಯಶೋಧರವರನ್ನು ಕೆಲಸದಿಂದ ವಜಾ ಮಾಡಬೇಕೆಂದು ತಿಳಿಸಿರುತ್ತಾರೆಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಯಶೋಧ ರವರು ಮೌಖಿಕವಾಗಿ ದೂರು ನೀಡಿರುತ್ತಾರೆ, ಆದರೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಅಲ್ಲದೆ ಸರಕಾರದ ನಿಯಮವನ್ನು ಪಾಲಿಸದೆ ಏಕಾ ಏಕಿ ಶಾಲೆಯ ಬಿಸಿಯೂಟ ಕೆಲಸದಿಂದ ಕಾನೂನು ಬಾಹಿರವಾಗಿ ವಜಾ ಮಾಡಿರುತ್ತಾರೆ. ಈ ಬಗ್ಗೆ ಅಕ್ಷರ ದಾಸೋಹ ನೌಕರರ ಸಂಘ ಎಐಸಿಸಿಟಿಯು ವತಿಯಿಂದ ಜೂನ್ 14 ರಂದು ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರಿಗೆ ದೂರು ನೀಡಲಾಗಿದೆ. ಆದರೂ ಈ ಬಗ್ಗೆ ಯಶೋಧ ಅವರ ಸಮಕ್ಷಮ ಯಾವುದೇ ತನಿಖೆ ಕೈಗೊಳ್ಳದೆ ರಾಜಕೀಯ ಪ್ರಭಾವದಿಂದ ಕೆಲಸದಿಂದ ವಜಾ ಮಾಡಲಾಗಿದೆ ಎಂದವರು ಆರೋಪಿಸಿದರು.

ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಜಯಶ್ರೀ, ಕಾರ್ಯದರ್ಶಿ ವೀಣಾ, ಪ್ರಮುಖರಾದ ರಾಜಾ ಚೆಂಡ್ತಿಮಾರ್, ಜಯಮತಿ, ಕೃಷ್ಣಪ್ಪ ಪುದ್ದೋಟ್ಟು, ಸುರೇಂದ್ರ ಕೋಟ್ಯಾನ್, ಇಬ್ರಾಹಿಂ ಮೈಂದಾಳ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.