ಡೈಲಿ ವಾರ್ತೆ:30 ಜೂನ್ 2023

ಮದುವೆ ಕಾರ್ಡ್ ಕೊಡೋ ನೆಪದಲ್ಲಿ ಕಳುವಿಗೆ ಬಂದ ಖದೀಮರು: ಈಗ ಪೊಲೀಸರ ಅತಿಥಿ

ದಾವಣಗೆರೆ: ಜನರು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕೂಡಾ ಖದೀಮರ ಬಲೆಗೆ ಬಿದ್ದೇ ಬೀಳುತ್ತಾರೆ. ಮನೆಯಲ್ಲಿ ಒಂದಿಬ್ಬರು ಇದ್ದ ಸಂದರ್ಭದಲ್ಲಿ ಮದುವೆಯ ಕಾರ್ಡ್ ಕೊಡಲು ಬಂದಿರುವುದಾಗಿ ಹೇಳಿ ಮೈ ಮೇಲೆ ಹಾಕಿದ್ದ ಬಂಗಾರದ ಒಡವೆಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿ ಸಿಗದಿದ್ದಾಗ ಕೊನೆಗೆ ಮೊಬೈಲ್ ಕದ್ದು ಓಡಿ ಹೋಗಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯೊಂದರಲ್ಲಿ ಮಹಿಳೆಯರು ಟಿವಿ ನೋಡುತ್ತಿದ್ದಾಗ ಇಬ್ಬರು ಖದೀಮರು ಮನೆಗೆ ಭೇಟಿ ನೀಡಿದ್ದಾರೆ.
ನಾವು ಮದುವೆ ಕಾರ್ಡ್ ಕೊಡಲು ಬಂದಿರುವುದಾಗಿ ಹೇಳಿ ಮನೆಯೊಳಗೆ ಪ್ರವೇಶ ಮಾಡಿದ್ದಾರೆ. ಮಹಿಳೆಯರ ಬಾಯಿ ಮುಚ್ಚಿ, ಕೊರಳಿನಲ್ಲಿದ್ದ ಬಂಗಾರ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಮಹಿಳೆಯರು ಜೋರಾಗಿ ಕೂಗಿಕೊಂಡಾಗ ಅಕ್ಕ-ಪಕ್ಕದಲ್ಲಿದ್ದ ಜನರು ಅಲ್ಲಿಗೆ ಧಾವಿಸಿದ್ದಾರೆ.

ಈ ವೇಳೆ ಕಳ್ಳರು ಬಂಗಾರ ಸಿಗದ ಹಿನ್ನೆಲೆ ಮೊಬೈಲ್ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ ಆರೋಪಿಗಳಾದ ಮಂಜುನಾಥ್ ಭಜಂತ್ರಿ ಹಾಗೂ ಪಿ ಮಂಜುನಾಥ್‌ನನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.

ಪ್ರತಿಯೊಬ್ಬರು ಇಂತಹ ಕೃತ್ಯ ನಡೆಸುತ್ತಿರುವವರಿಂದ ಎಚ್ಚರಿಕೆಯಿಂದ ಇರಿ ಎಂದು ಜನರಲ್ಲಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.