ಡೈಲಿ ವಾರ್ತೆ: 2 ಜುಲೈ 2023

‘ಲವ್ ಮಾಡು’ ಎಂದು ಟೀಚರ್ ಮಗನ ಕಾಟ: ಸಾವಿಗೆ ಶರಣಾದ್ಲು ಹತ್ತನೇ ತರಗತಿ ವಿದ್ಯಾರ್ಥಿನಿ

ಬೆಂಗಳೂರು: ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಸಾವಿಗೆ ಶಿಕ್ಷಕಿ ಮತ್ತು ಆಕೆಯ ಪುತ್ರನೇ ಕಾರಣ ಎಂದು ಆರೋಪಿಸಿ ಬಾಲಕಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

ಹೊಸಕೋಟೆ ನಗರದ ಪಾರ್ವತಿಪುರ ನಿವಾಸಿ ಸಾರಾ (16) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಖಾಸಗಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿದ್ದ ಈಕೆ, ವಾರದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ತಮ್ಮ ಮಗಳ ಸಾವಿಗೆ ಶಿಕ್ಷಕಿ ಮತ್ತು ಆಕೆಯ ಪುತ್ರನೇ ಕಾರಣ ಎಂದು ಪಾಲಕರು ಆರೋಪಿಸಿದ್ದಾರೆ.

ಮಗಳು ಆತ್ಮಹತ್ಯೆ ಮಾಡಿಕೊಂಡ ಒಂದು ವಾರದ ನಂತರ ಶಿಕ್ಷಕಿ ವಿರುದ್ಧ ಹೊಸಕೋಟೆ ಪೊಲೀಸರಿಗೆ ದೂರು ನೀಡಲಾಗಿದ್ದು, ಮಗಳ ಸಾವಿಗೆ ಶಿಕ್ಷಕಿ ಮತ್ತು ಆಕೆಯ ಪುತ್ರನೇ ಕಾರಣ ಎಂದು ಆರೋಪಿಸಲಾಗಿದೆ.
ಆತ ಪ್ರಪೋಸ್ ಮಾಡಿದ್ದನ್ನು ನಿರಾಕರಿಸಿದ್ದಕ್ಕೆ ನೀಡುತ್ತಿದ್ದ ಕಿರುಕುಳ ಸಹಿಸಲಾಗದೆ ವಿದ್ಯಾರ್ಥಿನಿ ಸಾವಿಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಸಾರಾ ಆತ್ಮಹತ್ಯೆ ಬಳಿಕ ತಮ್ಮ ಪುತ್ರನ ವಿಚಾರ ಎಲ್ಲೂ ಹೇಳಬಾರದು ಎಂದು ಶಿಕ್ಷಕಿ ಶಾಲಾ ಮಕ್ಕಳಿಗೆ ತಾಕೀತು ಮಾಡಿದ್ದರು ಎಂದೂ ಹೇಳಲಾಗುತ್ತಿದೆ.
ಸಾರಾ ಆತ್ಮಹತ್ಯೆ ಮಾಡಿಕೊಂಡ ಕೆಲವು ದಿನಗಳ ಬಳಿಕ ಸಹಪಾಠಿಗಳು ಆಕೆಯ ಪಾಲಕರಿಗೆ ಈ ವಿಷಯವನ್ನೆಲ್ಲ ತಿಳಿಸಿದ್ದರಿಂದ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಆ ಮೇರೆಗೆ ಹೊಸಕೋಟೆ ಪೊಲೀಸರು ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗಳ ಸಾವಿಗೆ ಸಂಬಂಧಿಸಿದಂತೆ ನ್ಯಾಯ ದೊರಕಿಸಿಕೊಡಬೇಕು ಎಂದು ಪಾಲಕರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.