ಡೈಲಿ ವಾರ್ತೆ:03 ಜುಲೈ 2023
ತಿರುಪತಿ ಸಮೀಪದ ಜಲಪಾತದಲ್ಲಿ ಮುಳುಗಿ ಮಂಗಳೂರಿನ ಯುವಕ ಮೃತ್ಯು
ಮಂಗಳೂರು: ತಿರುಪತಿ ಸಮೀಪದ ಜಲಪಾತವೊಂದಕ್ಕೆ ಪ್ರವಾಸಿಗನಾಗಿ ತೆರಳಿದ್ದ ಮಂಗಳೂರಿನ ಯುವಕನೊಬ್ಬ ಜಲಪಾತಕ್ಕೆ ಧುಮುಕಿ ಮೇಲೆ ಬರಲಾಗದೆ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.
ಕುಳಾಯಿ ಹೊನ್ನೆಕಟ್ಟೆ ನಿವಾಸಿ ಸುಮಂತ್ ಅಮೀನ್ (23) ಮೃತರು.
ಸುಮಂತ್ ಅವರು ಚೆನ್ನೈಯ ಪ್ರತಿಷ್ಠಿತ ರಾಜೀವ ಗಾಂಧಿ ಯುನಿವರ್ಸಿಟಿಯಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದು, ತಂದೆ ಸುರೇಶ್ ಅಮೀನ್ ಬಳಿ ತಿರುಪತಿಗೆ ಹೋಗುವುದಾಗಿ ಹೇಳಿದ್ದರು. ಮಧ್ಯಾಹ್ನ 2.30ರ ವೇಳೆಗೆ ತಿರುಪತಿಯಿಂದ 60 ಕಿ.ಮೀ. ದೂರದ ತಲಕೋನ ಜಲಪಾತಕ್ಕೆ ತನ್ನ ಸಹಪಾಠಿ ಜತೆ ಹೋಗಿ ಸ್ನಾನ ಮಾಡುತ್ತಿದ್ದರು. ಈ ಸಂದರ್ಭ
ಬಂಡೆಕಲ್ಲಿನಿಂದ 10 ಅಡಿ
ಕೆಳಭಾಗಕ್ಕೆ ಧುಮುಕಿದಾಗ ನೀರು ಹಾದು ಹೋಗುವ ಗುಹೆಗೆ ಕಾಲು ಸಿಲುಕಿದೆ. ಇದನ್ನು ನೋಡಿದ ಸ್ನೇಹಿತ ಕೂಡಲೇ ಧಾವಿಸಿ ಸುಮಂತ್‌ನನ್ನು ಮೇಲಕ್ಕೆತ್ತಿದ್ದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಕೂಡಲೇ ಮನೆಯಲ್ಲಿರುವವರಿಗೆ ವಿಚಾರ ತಿಳಿಸಲಾಗಿದ್ದು, ರವಿವಾರ ಬೆಳಗ್ಗೆ ಮೃತದೇಹವನ್ನು ಕುಳಾಯಿ ಹೊನ್ನೆಕಟ್ಟೆಯಲ್ಲಿರುವ ಮನೆಗೆ ತರಲಾಯಿತು.
ಸುಮಂತ್ ಅಮೀನ್ ಅವರು ಪ್ರತಿಭಾನ್ವಿತ, ಪರೋಪಕಾರಿ ವಿದ್ಯಾರ್ಥಿಯಾಗಿದ್ದರು. ಡಾಕ್ಯುಮೆಂಟರಿ, ಫೋಟೋ ಗ್ರಫಿ, ಪ್ರವಾಸ ಅವರ ಹವ್ಯಾಸವಾಗಿತ್ತು. 2 ವರ್ಷದ ಹಿಂದೆ ಎಂಎಸ್ಸಿ ವಿದ್ಯಾಭ್ಯಾಸಕ್ಕೆ ಚೆನ್ನೈನ ರಾಜೀವ್‌ಗಾಂಧಿ ಯುನಿವರ್ಸಿಟಿಗೆ ತೆರಳಿ ವ್ಯಾಸಂಗ ಮಾಡುತ್ತಿದ್ದರು. ಸುಮಂತ್ ತಂದೆ ಸುರೇಶ್ ಅಮೀನ್ ಪಯ್ಯನ್ನೂರು ಕೆನರಾ ಬ್ಯಾಂಕ್‌ನ ಮ್ಯಾನೇಜರ್, ತಾಯಿ ಉಮಾಕ್ಷಿ ಕೆಂಜಾರು ಸರಕಾರಿ ಶಾಲೆಯ ಮುಖ್ಯಶಿಕ್ಷಕಿಯಾಗಿ ಕರ್ತವ್ಯದಲ್ಲಿದ್ದಾರೆ.