ಡೈಲಿ ವಾರ್ತೆ: 3 ಜುಲೈ 2023
ಬ್ರಹ್ಮಾವರದಲ್ಲಿ ಪತ್ರಿಕಾ ದಿನಾಚರಣೆ:ಸುದ್ದಿಯ ನೈಜತೆಯನ್ನು ಪರಿಶೀಲಿಸದವ ಉತ್ತಮ ಪತ್ರಕರ್ತನಾಗಲಾರ- ಶ್ರೀರಾಜ್ ಗುಡಿ
ಕೋಟ: ಮಾಧ್ಯಮದಲ್ಲಿ ವರದಿಗಾರನಾಗಿ ಕೆಲಸ ಮಾಡುವವರಿಗೆ ಸುದ್ದಿಯ ನೈಜತೆಯನ್ನು ಪರಾಮರ್ಶಿಸುವ ಗುಣ ಇರಬೇಕು. ಇದು ಇಲ್ಲವಾದರೆ ಆತ ಉತ್ತಮ ವರದಿಗಾರನಾಗಲು ಅಸಾಧ್ಯ ಹಾಗೂ ಆತನಿಂದ ಸಮಾಜಕ್ಕೆ ತಪ್ಪು ಸಂದೇಶ ನೀಡುವ ಸುದ್ದಿಗಳು ಹೊರಹೊಮ್ಮತ್ತದೆ ಎಂದು ಮಣಿಪಾಲ ಮಾಹೆಯ ಸಹಾಯಕ ಪ್ರಾಧ್ಯಾಪಕ ಶ್ರೀರಾಜ್ ಗುಡಿ ತಿಳಿಸಿದರು.
ಅವರು ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ (ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಸಂಸ್ಥೆ) ಆಶ್ರಯದಲ್ಲಿ ಎಸ್.ಎಂ.ಎಸ್. ಕಾಲೇಜು ಬ್ರಹ್ಮಾವರ ಹಾಗೂ ಇಲ್ಲಿನ ಕನ್ನಡ ವಿಭಾಗ ಮತ್ತು ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಸಹಕಾರದಲ್ಲಿ ಕಾಲೇಜು ಸಭಾಂಗಣದಲ್ಲಿ ಜು. 3 ರಂದು ಜರಗಿದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ದಿಕ್ಸೂಚಿ ಮಾತನಾಡಿದರು.
ನವ ಮಾಧ್ಯಮಗಳ ಪ್ರಭಾವದಿಂದ ಅಸತ್ಯಗಳು ಹೆಚ್ವು ಪ್ರಚಾರಗೊಳ್ಳುತ್ತಿದೆ. ಆದರೆ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು ಸತ್ಯಾಂಶದ ವರದಿಗಳನ್ನು ಬಿತ್ತರಿಸುತ್ತಿದೆ ಎಂದರು.
ಬ್ರಹ್ಮಾವರ ತಹಶಿಲ್ದಾರ್ ರಾಜಶೇಖರಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಜನಾಂಗ ಮಾಧ್ಯಮ ಲೋಕದ ಕಡೆಗೆ ಆಸಕ್ತಿ ಮೂಡಿಸಿಕೊಳ್ಳಬೇಕು. ಕೆಟ್ಟದನ್ನು ಪ್ರಶ್ನಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಆಗ ಪ್ರಜ್ಞಾವಂತ ಸಮಾಜ ನಿರ್ಮಾಣ ಸಾಧ್ಯವಿದೆ ಎಂದರು.
ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಲೆವೂರು ರಾಜೇಶ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ವಹಿಸಿದ್ದರು.
ಈ ಸಂದರ್ಭ ಹಿರಿಯ ಪತ್ರಕರ್ತ ಉದಯ ಆಚಾರ್ ಸಾಸ್ತಾನ ಅವರಿಗೆ ಪತ್ರಿಕಾ ದಿನದ ಸಮ್ಮಾನ ನೆರವೇರಿಸಲಾಯಿತು.
ಕಾಲೇಜಿನ ಸಂಚಾಲಕ ರೆ.ಫಾ. ಎಂ.ಸಿ.ಮಥಾಯಿ, ಪ್ರಾಂಶುಪಾಲ ಡಾ.ಕೆ.ಮಂಜುನಾಥ ಉಡುಪ ಉಪಸ್ಥಿತರಿದ್ದರು.
ಸಂಘದ ಸದಸ್ಯ ವಸಂತ ಗಿಳಿಯಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನಾಡಿದರು. ಕಾರ್ಯದರ್ಶಿ ಹರೀಶ್ ಕಿರಣ್ ತುಂಗ, ಜ ಪ್ರವೀಣ್ ಮುದ್ದೂರು ಅತಿಥಿಗಳನ್ನು ಪರಿಚಯಿಸಿದರು. ಸಂಘದ ಗೌರವಾಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ,
ಕೆ.ಜಿ.ವೈದ್ಯ ವಂದಿಸಿದರು.