ಡೈಲಿ ವಾರ್ತೆ: 7 ಜುಲೈ 2023

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಲ್ಲದ ಮಳೆ: ಅಧಿವೇಶನ ಬಿಟ್ಟು ಜಿಲ್ಲೆಗೆ ಆಗಮಿಸಿದ ಉಸ್ತುವಾರಿ ಸಚಿವ ಮಂಕಾಳ ವೈದ್ಯ

ಬೆಂಗಳೂರು: ಕರಾವಳಿಯಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ತೀವ್ರ ತೊಂದರೆಯಾಗುತ್ತಿರುವುದನ್ನು ತಿಳಿದ ಮೀನುಗಾರಿಕೆ ಹಾಗೂ ಬಂದರು ಒಳನಾಡು ಜಲಸಾರಿಗೆ ಸಚಿವರೂ ಆಗಿರುವ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಮಹತ್ವದ ವಿಧಾನಸಭಾ ಅಧಿವೇಶನವನ್ನು ಅರ್ಧದಲ್ಲಿಯೇ ಬಿಟ್ಟು ನೆರೆ ಪೀಡಿತ ಪ್ರದೇಶಗಳ ವೀಕ್ಷಣೆ ಮತ್ತು ಜನರ ಅಹವಾಲು ಆಲಿಸಲು ತವರು ಜಿಲ್ಲೆಗೆ ಆಗಮಿಸಿದ್ದಾರೆ

ಕಳೆದ ಮೂರ್ನಾಲ್ಕು ದಿನದಿಂದ ಕರಾವಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಗ್ಗು ಪ್ರದೇಶಗಳು ಜಲಾವೃತ್ತವಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗುತ್ತಿದೆ. ಜಿಲ್ಲೆಯಲ್ಲಿ, ಅದರಲ್ಲೂ ವಿಶೇಷವಾಗಿ ಕರಾವಳಿ ಭಾಗದಲ್ಲಿ ಮಳೆ ಗಾಳಿಯಿಂದ ಜನಸಾಮಾನ್ಯರು ತೀವ್ರ ತೊಂದರೆಗೊಳಗಾಗಿದ್ದು, ರಸ್ತೆಗಳಲ್ಲಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ವಾಹನ ಸಂಚಾರ ದುಸ್ತರವೆನಿಸಿದೆ. ಗುಡ್ಡ ಕುಸಿತ, ಮನೆಯ ಮೇಲೆ ಮರಗಳು ಉರುಳುವಂತ ಅವಘಡಗಳ ಜೊತೆಗೆ ಮನೆಗಳಿಗೆ ನೀರು ನುಗ್ಗಿದ ಘಟನೆಗಳೂ ವರದಿಯಾಗುತ್ತಿದೆ.

ವಿಧಾನಸಭೆಯ ಮಳೆಗಾಲದ ಅಧಿವೇಶನದಲ್ಲಿ ಸರಕಾರದ ಬಹುಮುಖ್ಯ ಭಾಗವಾಗಿ ಹಾಜರಿದ್ದು, ಅಧಿವೇಶನದಲ್ಲಿ ಶಾಸಕರುಗಳು ಕೇಳುವ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸುವ ಜವಾಬ್ದಾರಿ ತನ್ನ ಮೇಲಿದೆ ಎನ್ನುವ ಅರಿವಿದ್ದರೂ, ಜಿಲ್ಲೆಯ ಜನರ ಕಷ್ಟ ಕಾಲದಲ್ಲಿ ಜೊತೆಯಾಗಿ ಧೈರ್ಯ ತುಂಬುವುದೂ ತನ್ನ ಆದ್ಯ ಕರ್ತವ್ಯವೆಂದು ತಿಳಿದು ಸಭಾಧ್ಯಕ್ಷರ ಅನುಮತಿ ಪಡೆದು ನೆರೆಪೀಡಿತ ಪ್ರದೇಶಗಳ ವೀಕ್ಷಣೆಗಾಗಿ ತವರಿಗೆ ಆಗಮಿಸಿದ್ದಾರೆ.