ಡೈಲಿ ವಾರ್ತೆ: 7 ಜುಲೈ 2023
ಎಪಿಎಂಸಿ ಕಾಯ್ದೆ ವಾಪಸ್ಸು ಪಡೆದ ಸರ್ಕಾರ: ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: ತುಂಬಾ ಚರ್ಚೆಗೆ ಗ್ರಾಸವಾಗಿದ್ದ ಎಪಿಎಂಸಿ ಕಾಯ್ದೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಪಸ್ಸು ಪಡೆದಿದ್ದಾರೆ.
ಇಂದು 14ನೇ ಬಜೆಟ್ ಮಂಡನೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಎಪಿಎಂಸಿ ಕಾಯ್ದೆಯನ್ನು ವಾಪಸ್ ಪಡೆದಿರುವುದಾಗಿ ಘೋಷಣೆ ಮಾಡಿದರು. ಕೇಂದ್ರ ಸರ್ಕಾರದ ಸಲಹೆಯಂತೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಪಿಎಂಸಿ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಈ ಕಾಯ್ದೆಗೆ ಭಾರೀ ವಿರೋಧವೂ ವ್ಯಕ್ತವಾಗಿತ್ತು. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕವನ್ನು ಸದನದಲ್ಲೂ ಮಂಡಿಸಲಾಗಿತ್ತು.
ಎಪಿಎಂಸಿ ಕಾಯ್ದೆ ಉದ್ದೇಶ ಏನಿತ್ತು?
ಖಾಸಗಿ ವ್ಯಾಪಾರಿಗಳು ರೈತರಿಂದ ನೇರವಾಗಿ ಬೆಳೆ ಖರೀದಿಸಲು ಅವಕಾಶ ನೀಡುವ, ಎಪಿಎಂಸಿಯ ಚೌಕಟ್ಟಿನ ಹೊರಗೂ ವ್ಯವಹಾರ ನಡೆಸಬಹುದಾದ ಕಾಯ್ದೆಯನ್ನು ಕೇಂದ್ರ ಸರ್ಕಾರ ಮಂಡಿಸಿತ್ತು. ಅದೇ ಪ್ರಕಾರ ರಾಜ್ಯದಲ್ಲೂ ಜಾರಿ ಮಾಡಲಾಗಿತ್ತು. ಆದರೆ, ದೇಶದ ಕೆಲವು ಕಡೆಗಳಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಈ ವಿಧೇಯಕವನ್ನು ಕೇಂದ್ರ ಹಿಂಪಡೆದಿತ್ತು. ರಾಜ್ಯ ಸರ್ಕಾರ ಮಾತ್ರ ಹಿಂಪಡೆದಿರಲಿಲ್ಲ. ಇದೀಗ ಎಪಿಎಂಪಿ ಕಾಯ್ದೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಬಜೆಟ್ನಲ್ಲಿ ಸಿದ್ದರಾಮಯ್ಯ ಅವರು ರೈತರಿಗೆ ಶೂನ್ಯ ಬಡಿದರದ ಸಾಲ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಿದ್ದಾರೆ. ಅಲ್ಲದೆ, ಗುಡ್ಡಗಾಡು ಪ್ರದೇಶದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಿಕ್ ವ್ಯಾನ್ ಖರೀದಿಗೆ 7 ಲಕ್ಷದವರೆಗೆ ಸಾಲ ನೀಡಲಾಗುವುದು ಎಂದು ಘೋಷಣೆ ಮಾಡಿದರು.