ಡೈಲಿ ವಾರ್ತೆ: 7 ಜುಲೈ 2023
ಸದನದ ಒಳಗಡೆ ಶಾಸಕರ ಸೀಟ್‍ನಲ್ಲಿ ಕುಳಿತಿದ್ದ ವ್ಯಕ್ತಿ ಕರಿಯಪ್ಪ ಯಾನೇ ತಿಪ್ಪೇರುದ್ರ!
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆಯ ವೇಳೆ ಸದನದ ಒಳಗಡೆ ಕುಳಿತಿದ್ದ ವ್ಯಕ್ತಿಯನ್ನು ಕರಿಯಪ್ಪ ಯಾನೇ ತಿಪ್ಪೇರುದ್ರ ಎಂದು ಗುರುತಿಸಲಾಗಿದೆ.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಅವರು ಕರಿಯಪ್ಪ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. 70 ವರ್ಷದ ಈ ವ್ಯಕ್ತಿಯನ್ನು ಪೊಲೀಸ್ ಕಮಿಷನರ್ ಗಂಭೀರವಾಗಿ ಪರಿಗಣಿಸಿದ್ದಾರೆ.
ಯಾವ ಶಾಸಕರ ಹೆಸರನ್ನು ಬಳಸಿ ಒಳಹೋಗಿದ್ದ?, ಆಸನದಲ್ಲಿ ಕುಳಿತುಕೊಂಡಿದ್ದು ಯಾಕೆ? ಹಾಗೂ ಯಾವ ದಾಖಲೆಗಳು ತನ್ನ ಬಳಿಯಿದ್ದವು ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸದನದಲ್ಲಿ ಭದ್ರತಾ ಲೋಪ – ಬಜೆಟ್ ಮಂಡನೆ ವೇಳೆ ಶಾಸಕರ ಸೀಟ್‍ನಲ್ಲಿ ಕುಳಿತ ಖಾಸಗಿ ವ್ಯಕ್ತಿ
ಸದನದೊಳಗೆ ಎಂಟ್ರಿ ಆಗಿದ್ದು ಹೇಗೆ?:
ಸುಮಾರು 70 ರಿಂದ 72 ವರ್ಷದ ವ್ಯಕ್ತಿ ನೇರವಾಗಿ ವಿಧಾನಸೌಧಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ ಎಂಟ್ರಿ ಭಾಗದಲ್ಲಿದ್ದ ಮಾರ್ಷಲ್ಸ್ ಯಾರು ನೀವು ಅಂತಾ ಪ್ರಶ್ನೆ ಮಾಡಿದ್ದಾರೆ. ಆಗ ವ್ಯಕ್ತಿ ನಾನು ಶಾಸಕ ಗೊತ್ತಾಗಲ್ವಾ ಅಂತಾ ಅವಾಜ್ ಹಾಕಿದ್ದು, ಮಾರ್ಷಲ್ಸ್ ಐಡಿ ಕೊಡಿ ಸಾರ್ ಎಂದಿದ್ದಾರೆ. ಐಡಿ ಯಾಕ್ರೀ ನಾನು ಮೊಳಕಾಲ್ಮೂರು ಶಾಸಕ. ಐಡಿ ಕಾರಿನ ಬಳಿ ಇದೆ ಎಂದು ವ್ಯಕ್ತಿ ಗದರಿದ್ದಾರೆ. ಹೀಗಾಗಿ ಮಾರ್ಷಲ್ಸ್ ಒಳಪ್ರವೇಶಿಸಲು ಅವಕಾಶ ಕೊಟ್ಟಿದ್ದಾರೆ.
ಒಳ ಹೋದ ಬಳಿಕ ನೇರವಾಗಿ ಸದನದ ಸದಸ್ಯರ ಜಾಗದಲ್ಲಿ ಕುಳಿತಿದ್ದಾರೆ. ಈ ವೇಳೆ ಅನುಮಾನಗೊಂಡ ಶಾಸಕ ಶರಣ ಗೌಡ ಅವರು ಅಕ್ಕ-ಪಕ್ಕದಲ್ಲಿದ್ದ ಬೇರೆ ಶಾಸಕರ ಬಳಿಯೂ ವಿಚಾರಿಸಿದ್ದಾರೆ. ಎಲ್ಲರೂ ನಮಗೆ ಪರಿಚಯ ಇಲ್ಲ ಅಂತಾ ಉತ್ತರಿಸಿದ್ದಾರೆ. ಹೀಗಾಗಿ ಶಾಸಕರು ನೇರವಾಗಿ ವ್ಯಕ್ತಿಯನ್ನೇ ಕೃಳಿದ್ದಾರೆ. ಆಗ ಅವರು ನಾನು ಮೊಳಕಾಲ್ಮೂರು ಶಾಸಕ ಎಂದಿದ್ದಾರೆ.
ತಕ್ಷಣ ಅನುಮಾನಗೊಂಡ ಶಾಸಕರು ಕಾರ್ಯದರ್ಶಿ ಗಮನಕ್ಕೆ ತಂದು ಸ್ಪೀಕರ್‍ಗೆ ದೂರು ನೀಡಿದ್ದಾರೆ. ಅದಾದ ಬಳಿಕ ಸ್ಪೀಕರ್ ರಿಂದ ಮಾರ್ಷಲ್ಸ್ ಮೂಲಕ ವ್ಯಕ್ತಿಯನ್ನು ಹೊರಗೆ ಕಳುಹಿಸಲಾಗಿದೆ. ಕೂಡಲೇ ವಿಧಾನಸೌಧ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.