ಡೈಲಿ ವಾರ್ತೆ:09 ಜುಲೈ 2023
ಹಣಕ್ಕಾಗಿ 15 ಮಹಿಳೆಯರ ಜತೆ ಮದ್ವೆ! ಮೈಸೂರು ಪೊಲೀಸರ ಕೈಗೆ ಸಿಕ್ಕಿಬಿದ್ದ ಬೆಂಗಳೂರು ಖತರ್ನಾಕ್ ಆಸಾಮಿಯಾ ಮಹಾ ಮೋಸ ಬಯಲು!
ಮೈಸೂರು: ವಿಧವೆಯರು, ಅವಿವಾಹಿತ ಮಹಿಳೆಯರಿಗೆ ಆನ್ಲೈನ್ನಲ್ಲಿ ಗಾಳ ಹಾಕಿ ಬೆಣ್ಣೆಯಂತಹ ಮಾತುಗಳಿಂದ ಮರುಳು ಮಾಡಿ, ಮದುವೆಯಾಗಿ ಹಣ ಮತ್ತು ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದ ಖತರ್ನಾಕ್ ಆಸಾಮಿ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಮಹೇಶ್ (35) ಬಂಧಿತ ಆರೋಪಿ. ಈತ ಬೆಂಗಳೂರಿನ ಬನಶಂಕರಿ ಬಡಾವಣೆಯ ನಿವಾಸಿ. ಮೈಸೂರಿನ ಕುವೆಂಪುನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮಹಾವಂಚಕನನ್ನು ಕಾನೂನಿನ ಬಲೆಗೆ ಬೀಳಿಸಿದ್ದಾರೆ. ಬಂಧಿತನಿಂದ 2 ಲಕ್ಷ ನಗದು, 2 ಕಾರು, ಒಂದು ಬ್ರೇಸ್ಲೆಟ್, ಒಂದು ಉಂಗುರ, ಎರಡು ಚಿನ್ನದ ಬಳೆ, ಒಂದು ನೆಕ್ಲೆಸ್ ಹಾಗೂ 7 ಮೊಬೈಲ್ಗಳನ್ನ ವಶಕ್ಕೆ ಪಡೆಯಲಾಗಿದೆ.
ಆರೋಪಿ ಮಹೇಶ್ಗೆ ಶಾದಿ ಡಾಟ್ ಕಂನಲ್ಲಿ ಮೈಸೂರಿನ ನಿವಾಸಿ ಹೇಮಲತಾ ಎಂಬುವರು ಪರಿಚಯವಾಗಿದ್ದರು. ತಾನೊಬ್ಬ ಡಾಕ್ಟರ್ ಎಂದು ಸುಳ್ಳು ಹೇಳಿ, ಆಕೆಯನ್ನು ನಂಬಿಸಿ, ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಮದುವೆಯಾಗಿದ್ದ. ಇದಾದ ಬಳಿಕ ತನ್ನ ವರಸೆ ಶುರು ಮಾಡಿದ್ದ. ತಾನೊಂದು ಕ್ಲಿನಿಕ್ ತೆರೆಯಬೇಕೆಂದು ಅಂದುಕೊಂಡಿದ್ದೇನೆ. ಇದಕ್ಕಾಗಿ 70 ಲಕ್ಷ ರೂ. ಬೇಕಿದ್ದು, ಸಾಲ ಕೊಡಿಸು ಎಂದು ಹೇಮಲತಾಳನ್ನು ಒತ್ತಾಯಿಸುತ್ತಿದ್ದ. ಆದರೆ, ಸಾಲ ಕೊಡಿಸಲು ಹೇಮಲತಾ ಹಿಂದೇಟು ಹಾಕಿದರು. ಈಕೆ ತನ್ನ ದಾರಿಗೆ ಬರುತ್ತಿಲ್ಲ ಅಂತ ತಿಳಿದ ಬಳಿಕ ಆಕೆಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, 15 ಲಕ್ಷ ರೂ. ಹಣ ಹಾಗೂ ಚಿನ್ನಾಭರಣವನ್ನು ಕದ್ದು ಮಹೇಶ್ ಪರಾರಿಯಾಗಿದ್ದ. ಇದಾದ ಬಳಿಕ ಹೇಮಲತಾ ಕುವೆಂಪುನಗರ ಪೊಲೀಸರಿಗೆ ದೂರು ನೀಡಿದ್ದರು.
15 ಮದುವೆ ದೂರು ದಾಖಲಿಸಿಕೊಂಡ ಪೊಲೀಸರು: ಮಿಂಚಿನ ಕಾರ್ಯಾಚರಣೆ ನಡೆಸಿ, ಆರೋಪಿ ಮಹೇಶನ ಎಡೆಮುರಿಯನ್ನು ಕಟ್ಟಿದ್ದಾರೆ. ಬಳಿಕ ವಿಚಾರಣೆ ವೇಳೆ ಈತ ತಾನು ಡಾಕ್ಟರ್, ಇಂಜಿನಿಯರ್, ಸಿವಿಲ್ ಕಂಟ್ರಾಕ್ಟರ್ ಹೀಗೆ ಹಲವು ಪ್ರತಿಷ್ಠಿತ ಸ್ಥಾನಗಳ ಹೆಸರಲ್ಲಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈತ ವಿಧವೆ ಮತ್ತು ಅವಿವಾಹಿತ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ಈವರೆಗೆ ಸುಮಾರು 15 ಮಹಿಳೆಯರನ್ನು ಮದುವೆಯಾಗಿ ಅವರೆಲ್ಲರಿಗೂ ಕೈಕೊಟ್ಟಿರುವ ಸಂಗತಿ ಬಯಲಾಗಿದೆ.