ಡೈಲಿ ವಾರ್ತೆ:09 ಜುಲೈ 2023
ಕೊಟ್ಟ ಹಣ ವಾಪಸು ಕೇಳಿದಕ್ಕೆ ಹಂತಕರು ಕರೆಂಟ್ ಶಾಕ್ ಕೊಟ್ಟು, ಕತ್ತು ಹಿಸುಕಿ ಜೈನಮುನಿ ಹತ್ಯೆ!: ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
ಚಿಕ್ಕೋಡಿ: ಹೀರೇಕುಡಿ ನಂದಿ ಪರ್ವತ ಆಶ್ರಮದ ಜೈನಮುನಿ ಹತ್ಯೆ ಪ್ರಕರಣ ಜನತೆಯನ್ನು ಬೆಚ್ಚಿ ಬೀಳಿಸಿದೆ.
ಕೊಟ್ಟ ಹಣವನ್ನು ವಾಪಸ್ ಕೇಳಿದ್ದಕ್ಕಾಗಿ ಹಂತಕರು ಜೈನಮುನಿಯ ಹತ್ಯೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಜೈನಮುನಿಯ ಹತ್ಯೆಯನ್ನು ಎಷ್ಟೊಂದು ಭೀಕರವಾಗಿ ನಡೆಸಿದ್ದಾರೆ ಎಂಬ ಸತ್ಯವನ್ನು ಎಳೆಎಳೆಯಾಗಿ ಬಾಯಿಬಿಟ್ಟಿದ್ದಾರೆ.
ನಾಪತ್ತೆಯಾಗಿದ್ದ ಚಿಕ್ಕೋಡಿಯ ಹಿರೇಕೋಡಿ ಆಶ್ರಮದ ಜೈನಮುನಿ ಕಾಮಕುಮಾರ ನಂದಿಮಹಾರಾಜರ ದೇಹ ಪೀಸ್ ಪೀಸ್ ಆಗಿ ಪತ್ತೆಯಾಗಿದೆ. ಸ್ವಾಮೀಜಿಗೆ ಕರೆಂಟ್ ಶಾಕ್ ಕೊಟ್ಟು ಟಾರ್ಚರ್ ನೀಡಿ ಬಳಿಕ ತುಂಡು ತುಂಡಾಗಿ ಕತ್ತರಿಸಲಾಗಿದೆ ಎಂದು ತಿಳಿದು ಬಂದಿದೆ.
ಜುಲೈ 5ರಂದು ನಾಪತ್ತೆಯಾಗಿದ್ದ ಸ್ವಾಮೀಜಿ ಬಗ್ಗೆ ಜುಲೈ 7ರಂದು ನಾಪತ್ತೆ ಪ್ರಕರಣ ದಾಖಲಿಸಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.
ತೀವ್ರ ವಿಚಾರಣೆ ಬಳಿಕ ರಾಯಬಾಗ ತಾಲೂಕಿನ ಖಟಕಭಾವಿ ಗ್ರಾಮದ ಕೊಳವೆ ಬಾವಿಯಲ್ಲಿ ಶವ ಎಸೆದಿದ್ದಾಗಿ ಆರೋಪಿಗಳಾದ ನಾರಾಯಣ ಮಾಳಿ(35) ಹುಸೇನ್(34) ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯಿಂದ ಸಾಯಂಕಾಲದವರೆಗೆ 10 ಗಂಟೆಗಳ ಕಾಲ ಕೊಳವೆ ಬಾವಿಯಲ್ಲಿ ಶವ ಶೋಧ ಕಾರ್ಯಾಚರಣೆ ಮಾಡಿ ಶವ ಹೊರತೆರೆಯಲಾಗಿದೆ.
ಎ1 ಆರೋಪಿಯಾದ ನಾರಾಯಣನ ಜೊತೆ ಸ್ವಾಮೀಜಿಗೆ ಉತ್ತಮ ಸಂಬಂಧ ಇತ್ತು. ಸ್ವಾಮೀಜಿ 6 ಲಕ್ಷ ರೂ. ಹಣಕಾಸಿನ ಸಹಾಯ ಮಾಡಿದ್ದರು. ಈ ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ ಕಾರಣಕ್ಕೆ ಕೊಲೆ ಮಾಡಲಾಗಿದೆ.
ಕೊಳವೆ ಬಾವಿಯ 30 ಅಡಿ ಆಳದಲ್ಲಿ ಸ್ವಾಮೀಜಿ ಪಾರ್ಥಿವ ಶರೀರ ದೊರೆತಿದೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದೇವೆ. ಮರಣೋತ್ತರ ಪರೀಕ್ಷೆ ಬಳಿಕ ಪ್ರಕರಣದ ತನಿಖೆ ಮುಂದುವರಿಯಲಿದೆ ಎಂದು ಬೆಳಗಾವಿ ಎಸ್‌ಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ. ಜೈನಮುನಿಗಳ ಸಾವಿನಿಂದಾಗಿ ನಂದಿ ಪರ್ವತ ಆಶ್ರಮದಲ್ಲಿ ಭಕ್ತರು ಕಣ್ಣೀರಿನ ಕೋಡಿ ಹರಿಸಿದ್ದಾರೆ. ಆರೋಪಿಗಳಿಗೆ ಕಠಿಣಾತಿಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
ಸ್ವಾಮೀಜಿ ಹತ್ಯೆ ಬಳಿಕ ಪೊಲೀಸರ ಮುಂದೆ ಹಂತಕರು ಹೈಡ್ರಾಮಾ ನಡೆಸಿದ್ದರು. ಜುಲೈ 5ರ ರಾತ್ರಿ ನಂದಿ ಪರ್ವತ ಆಶ್ರಮದ ಕೋಣೆಯಲ್ಲಿ ಹತ್ಯೆ ನಡೆಸಿದ್ದರು. ಜುಲೈ 6 ರಂದು ಸ್ವಾಮೀಜಿಗಾಗಿ ಭಕ್ತರು, ಸಂಬಂಧಿಕರು ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಸ್ವಾಮೀಜಿಯನ್ನು ಅಪಹರಣ ಮಾಡಲಾಗಿದೆ ಎಂದು ತಿಳಿಸಿದ್ದರು. ಹೀಗಾಗಿ ಪೊಲೀಸರು ಅಪಹರಣ ಮಾಡಿದವರು ಚಹರೆ ಹೇಗಿತ್ತು ಚಿತ್ರ ಬಿಡಿಸಿ ಎಂದು ಸೂಚಿಸಿದ್ದಾರೆ. ಈ ವೇಳೆ ಇಬ್ಬರ ಹೇಳಿಕೆಗಳಿಗೆ ಸಾಮ್ಯತೆ ಇರಲಿಲ್ಲ. ಈ ಕಾರಣಕ್ಕೆ ಇಬ್ಬರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆಯ ವೇಳೆ ಅವರಿಬ್ಬರು ದಿಕ್ಕು ತಪ್ಪಿಸಲು ಯತ್ನಿಸಿದ್ದರು. ಒಮ್ಮೆ ನದಿಯಲ್ಲಿ ಶವ ಎಸೆದಿರುವುದಾಗಿ ಮತ್ತೊಮ್ಮೆ ಕೊಳವೆ ಭಾವಿಯಲ್ಲಿ ಶವ ಎಸೆದಿರುವುದಾಗಿ ಹೇಳಿಕೆ ನೀಡಿದ್ದರು. ತೀವ್ರ ವಿಚಾರಣೆ ಬಳಿಕ ಕೊಲೆ ಮಾಡಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದು ಎಳೆ ಎಳೆಯಾಗಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಕೊಲೆ ಮಾಡಿದ್ದು ಹೇಗೆ?
ಜುಲೈ 5 ರಂದು ಸ್ವಾಮೀಜಿಯನ್ನು ಕೊಲೆ ಮಾಡಲಾಗಿದೆ. ಅಡುಗೆ ಸಹಾಯಕಿ ಕೆಲಸ ಮುಗಿಸಿ ಹೋಗ್ತಿದ್ದಂತೆ ಆರೋಪಿಗಳು ಕೊಲೆಗೆ ಸ್ಕೆಚ್ ಹಾಕಿದ್ದಾರೆ. ವಿದ್ಯುತ್ ಶಾಕ್ ನೀಡಿ ಕತ್ತು ಹಿಸುಕಿ ಆರೋಪಿ ನಾರಾಯಣ ಕೊಂದಿದ್ದಾನೆ. ಬಳಿಕ ಸ್ನೇಹಿತ ಹುಸೇನ್‌ಗೆ ಕರೆಮಾಡಿ ಕರೆಸಿಕೊಂಡಿದ್ದಾನೆ. ಬಳಿಕ ಸ್ವಾಮೀಜಿ ಶವವನ್ನು ಇಬ್ಬರು ಜೊತೆಗೂಡಿ ಬೈಕ್‌ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಹಂತಕರು ಹಿರೇಕೋಡಿಯಿಂದ ಖಟಕಬಾವಿಯವರೆಗೂ 39 ಕಿ.ಮೀ ಬೈಕ್ ಮೇಲೆಯೇ ಶವವನ್ನು ಸಾಗಾಟ ಮಾಡಿದ್ದಾರೆ.
ಎ1 ಆರೋಪಿ ನಾರಾಯಣ ಮಾಳಿಯ ಸ್ವಗ್ರಾಮ ಖಟಕಬಾವಿ. ಮೊದಲು ಶವವನ್ನು ತನ್ನ ಜಮೀನಿನಲ್ಲೇ ಹೂಳಲು ನಾರಾಯಣ ಪ್ಲ್ಯಾನ್ ಮಾಡಿದ್ದ. ಆದರೆ ಶವ ಹೂತರೆ ಪೊಲೀಸರ ಕೈಗೆ ಸಿಕ್ಕಿಬೀಳುವ ಸಾಧ್ಯತೆ ಹೆಚ್ಚೆಂದು ಭಾವಿಸಿ ಕೊಳವೆ ಬಾವಿಯಲ್ಲಿ ಶವ ಎಸೆಯಲು ಆರೋಪಿಗಳು ಪ್ಲ್ಯಾನ್ ಮಾಡಿದ್ದರು. ಕೊಳವೆ ಬಾವಿಯಲ್ಲಿ ಶವ ಹೋಗದ ಕಾರಣ ಸ್ವಾಮೀಜಿಯ ದೇಹವನ್ನು ಪೀಸ್ ಪೀಸ್ ಮಾಡಿ, ಕೈ, ಕಾಲು, ತಲೆ ಬೇರ್ಪಡಿಸಿ ಬಳಿಕ ಶವ ತಂದಿದ್ದ ಸೀರೆಯಲ್ಲಿಯೇ ಸುತ್ತಿ ಕೊಳವೆ ಬಾವಿಗೆ ಹಾಕಿದ್ದರು.