ಡೈಲಿ ವಾರ್ತೆ:09 ಜುಲೈ 2023
ಗಂಗೊಳ್ಳಿ ಬಾರಿ ಗಾಳಿ ಮಳೆ ಮುರಿದು ಬಿದ್ದ ವಿದ್ಯುತ್ ಕಂಬಗಳು: ಮೆಸ್ಕಾಂ ಸಿಬ್ಬಂದಿಗಳಿಂದ ಕಾರ್ಯಾಚರಣೆ – ಸ್ಥಳೀಯರಿಂದ ಅಡ್ಡಿ, ಪೊಲೀಸ್ ಸಹಕಾರದಿಂದ ಕಾಮಗಾರಿ ಪೂರ್ಣ
ಕುಂದಾಪುರ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕುಂದಾಪುರ ಪರಿಸರದ ಪ್ರದೇಶಗಳಲ್ಲಿ ನೆರೆ ಮತ್ತಿತರ ಹಲವಾರು ಸಮಸ್ಯೆಗಳು ಉಂಟಾಗಿವೆ. ಮಳೆಯೊಂದಿಗೆ ಬಲವಾದ ಗಾಳಿಯೂ ಬೀಸುತ್ತಿರುವುದರಿಂದ ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಕೂಡಾ ಉರುಳಿವೆ. ಶನಿವಾರ ರಾತ್ರಿ ಕುಂದಾಪುರ ಸಮೀಪದ ಗಂಗೊಳ್ಳಿ ಪ್ರದೇಶದಲ್ಲಿ ಬೀಸಿದ ಬಲವಾದ ಗಾಳಿಗೆ ಸಾಂತನಕೆರೆ ಎಂಬಲ್ಲಿ ಮೂರು ವಿದ್ಯುತ್ ಕಂಬಗಳು ತುಂಡಾಗಿವೆ.
ಇದರಿಂದಾಗಿ ಆ ಪ್ರದೇಶದ ವಿದ್ಯುತ್ ಲೈನುಗಳಿಗೂ ಜಖಂ ಉಂಟಾಗಿ ಇಲಾಖೆಗೆ ಭಾರೀ ನಷ್ಟ ಸಂಭವಿಸಿದೆ.
ತುಂಡಾಗಿ ಬಿದ್ದ ವಿದ್ಯುತ್ ಕಂಬಗಳನ್ನು ಪುನಃ ನೆಟ್ಟು, ಲೈನ್ ಸರಿಪಡಿಸಲು ಭಾನುವಾರ ಬೆಳಿಗ್ಗೆ ಮೆಸ್ಕಾಂಮ್ ಸಿಬಂದಿಗಳು ಸಾಂತನಕೆರೆ ಪ್ರದೇಶಕ್ಕೆ ಬಂದಾಗ, ಸ್ಥಳೀಯರು ಕಾರ್ಯಾಚರಣೆಗೆ ಅಡ್ಡಿ ಯುಂಟುಮಾಡಿದ್ದಾರೆ ಎನ್ನಲಾಗಿದೆ.
ಹಲವು ವರ್ಷಗಳಿಂದಲೂ ಈ ವಿದ್ಯುತ್ ಕಂಬಗಳು ಖಾಸಗಿಯವರ ಸ್ಥಳದಲ್ಲಿದ್ದವು. ಮೆಸ್ಕಾಂಮ್ ಸಿಬಂದಿಗಳು ಮುರಿದ ಕಂಬಗಳನ್ನು ತೆರವುಗೊಳಿಸಿ, ಹೊಸ ಕಂಬಗಳನ್ನು ಅದೇ ಜಾಗದಲ್ಲಿ ಹುಗಿಯಲು ಮುಂದಾದಾಗ ಆ ಸ್ಥಳದ ಮಾಲೀಕರು ಆಕ್ಷೇಪಿಸಿದರು ಎನ್ನಲಾಗಿದೆ. ಸಿಬಂದಿಗಳು, ಹಳೆಯ ಕಂಬಗಳಿರುವಲ್ಲೇ ಹೊಸ ಕಂಬಗಳನ್ನು ನೆಡುವುದಾಗಿಯೂ, ಖಾಸಗಿಯವರ ಹೆಚ್ಚುವರಿ ಜಾಗಕ್ಕೆ ತೊಂದರೆಉಂಟು ಮಾಡುವುದಿಲ್ಲ ಎಂತಲೂ ಸ್ಪಷ್ಟಪಡಿಸಿದರೂ ಸಂಬಂಧಿಸಿದವರು ಹೊಸ ಕಂಬ ಹುಗಿಯಲು ಅಡ್ಡಿಪಡಿಸಿದರು.
ಬೇರೆ ದಾರಿ ಕಾಣದೇ ಸಿಬಂದಿಗಳು ಪೊಲೀಸರಿಗೆ ದೂರು ನೀಡಿದರು. ಗಂಗೊಳ್ಳಿ ಪೊಲೀಸರು ಸ್ಥಳಕ್ಕಾಗಮಿಸಿ ಸಂಬಂಧಪಟ್ಟವರ ಮನವೊಲಿಸಿ, ಕೆಲಸ ಸುಗಮಗೊಳಿಸಿದರು ಎನ್ನಲಾಗಿದೆ. ಮೆಸ್ಕಾಂಮ್ ಸಿಬಂದಿಗಳು ಮುರಿದಿದ್ದ ಕಂಬಗಳನ್ನು ಬದಲಿಸಿ ವಿದ್ಯುತ್ ಪೂರೈಕೆ ಸುಗಮಗೊಳಿಸಿದರು.