ಡೈಲಿ ವಾರ್ತೆ: 12 ಜುಲೈ 2023

ಜೈನಮುನಿ ಹಂತಕನ ಮನೆಯ ಮೂಕಪ್ರಾಣಿಗಳ ಪಾಲನೆ- ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ

ಚಿಕ್ಕೋಡಿ (ಬೆಳಗಾವಿ): ಚಿಕ್ಕೋಡಿಯ ಜೈನಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕನ ಮನೆಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ಅಲ್ಲದೆ ನಾರಾಯಣ ಮಾಳಿ ಮನೆಯಲ್ಲಿರುವ ಮೂಕಪ್ರಾಣಿಗಳನ್ನು ಪೊಲೀಸರು ಪಾಲನೆ ಮಾಡುತ್ತಿದ್ದಾರೆ.

ಹೌದು. ಹಿರೆಕೋಡಿಯ ಕಾಮಕುಮಾರ ನಂದಿ ಜೈನಮುನಿಯ ಹತ್ಯೆಗೈದ ಹಂತಕ ನಾರಾಯಣ ಮಾಳಿ ಈಗ ಜೈಲು ಸೇರಿದ್ದಾನೆ. ನಾರಾಯಣ ಮಾಳೆ ಅರೆಸ್ಟ್ ಆಗುತ್ತಿದ್ದಂತೆ ಆತನ ಕುಟುಂಬಸ್ಥರನ್ನ ಸ್ಥಳಾಂತರ ಮಾಡಲಾಗಿದೆ. ಹೀಗಾಗಿ ಆತನ ಮನೆ ಖಾಲಿಯಾಗಿದ್ದು, ಅವರ ಕುಟುಂಬ ಸಾಕಿ ಸಲಹಿದ್ದ ಜಾನುವಾರುಗಳು ಅನಾಥವಾಗಿವೆ.

ಕೊಲೆ ಆರೋಪದಲ್ಲಿ ಮಾಳಿ ಜೈಲು ಸೇರಿದ್ರೆ ಆತನ ಕುಟುಂಬಸ್ಥರು 2 ಆಕಳು ಹಾಗೂ 2 ಎಮ್ಮೆ ಮತ್ತು 40ಕ್ಕೂ ಹೆಚ್ಚು ಮೇಕೆಗಳನ್ನು ಶೆಡ್ ನಲ್ಲಿಯೇ ಬಿಟ್ಟು ಹೊರಟು ಹೋಗಿದ್ದಾರೆ. ಮಾಳೆ ಮನೆಗೆ ಭದ್ರತೆಗೆ ಅಂತ ಜುಲೈ 7 ರಂದು ನಿಯೋಜನೆಗೊಂಡಿದ್ದ ಕೆಎಸ್‍ಆರ್ ಪಿ ಪೊಲೀಸರು ಹಾಗೂ ಚಿಕ್ಕೋಡಿ ಪೊಲೀಸರು ಕಳೆದ ನಾಲ್ಕು ದಿನಗಳಿಂದ ಮಾಳೆ ಸಾಕಿದ್ದ ಮೇಕೆ ಹಾಗೂ ಹಸು, ಎಮ್ಮೆಗಳಿಗೆ ತಾವೇ ಮೇವು ಹಾಕಿ ನಿರುಣಿಸಿ ನೋಡಿಕೊಳ್ಳುತ್ತಿದ್ದಾರೆ.
ಮಾಳೆ ಪಾಪಿಯಾದರೂ ಸಹ ಆತ ತನ್ನ ಮನೆಯಲ್ಲಿ ಕಟ್ಟಿದ್ದ ಮೂಕ ಪ್ರಾಣಿಗಳ ರೋಧನೆ ನೋಡಲಾಗದೆ ಪೊಲೀಸರು ಅವುಗಳ ಲಾಲನೆ-ಪಾಲನೆ ಮಾಡುತ್ತಿದ್ದಾರೆ. ಪೊಲೀಸರ ಈ ಮಾನವೀಯ ಕೆಲಸಕ್ಕೆ ಈಗ ಮೆಚ್ಚುಗೆ ವ್ಯಕ್ತವಾಗಿದೆ.