ಡೈಲಿ ವಾರ್ತೆ: 13 ಜುಲೈ 2023

ಟೊಮ್ಯಾಟೋದಿಂದ ಗಳಿಸಿದ ಲಾಭವೇ ರೈತನಿಗೆ ಮುಳುವಾಯ್ತು: ರಾತ್ರಿ ನಡೆಯಿತು ಭೀಕರ ಹತ್ಯೆ!

ವಿಜಯವಾಡ: ದೇಶದಲ್ಲಿ ಟೊಮ್ಯಾಟೋ ಬೆಲೆ ಗಗನಮುಖಿಯಾಗಿದ್ದು, ರೈತರ ಮುಖದಲ್ಲಿ ಸಂತಸ ಉಂಟುಮಾಡಿದೆ. ಆದರೆ, ಅದೇ ಟೊಮ್ಯಾಟೋ ರೈತನೊಬ್ಬನ ಪ್ರಾಣ ಕಸಿದುಕೊಂಡಿರುವ ಕರುಣಾಜನಕ ಘಟನೆ ಆಂಧ್ರ ಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ.

ತಮ್ಮ ಜಮೀನಿನಲ್ಲಿ ಟೊಮ್ಯಾಟೋ ಬೆಳೆದು ತುಂಬಾ ಲಾಭ ಗಳಿಸಿದನ್ನು ನೋಡಿ, ಹಣ ಸುಲಿಗೆ ಮಾಡುವ ದುರುದ್ದೇಶದಿಂದ ದುಷ್ಕರ್ಮಿಗಳು ರೈತನನ್ನು ಕೊಲೆ ಮಾಡಿರುವುದಾಗಿ ವರದಿಯಾಗಿದೆ. ಕೊಲೆಯಾದ ರೈತನ್ನು ನರೇಮ್ ರಾಜಶೇಖರ್ ರೆಡ್ಡಿ (62) ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಇವರು 70 ಕ್ರೇಟ್ಸ್ ಟೊಮ್ಯಾಟೋವನ್ನು ಮಾರುಕಟ್ಟೆಯಲ್ಲಿ ಮಾರಿದ್ದರು.

ಮನೆಯಿಂದ ಹೋಗಿ ಮರಳಲೇ ಇಲ್ಲ ಈ ಘಟನೆ ಮಂಗಳವಾರ ರಾತ್ರಿ ಮದನಪಲ್ಲಿರುವ ಗ್ರಾಮದಲ್ಲಿ ನಡೆದಿದೆ. ಮೃತ ರಾಜಶೇಖರ್ ಹಾಲು ಹಾಕಲೆಂದು ಮನೆಯಿಂದ ಹೋದವರು ಮರಳಿ ಬರಲೇ ಇಲ್ಲ. ಅನುಮಾನಗೊಂಡ ಪತ್ನಿ, ತನ್ನ ಮಗಳಿಗೆ ಹೇಳಿದಳು. ಇಬ್ಬರು ಸೇರಿ ರಾಜಶೇಖರ್ಗೆ ಎಷ್ಟೇ ಫೋನ್ ಮಾಡಿದರೂ ಕರೆ ಮಾತ್ರ ಸ್ವಿಕರಿಸುತ್ತಿರಲಿಲ್ಲ. ಈ ವಿಚಾರ ತಿಳಿದು ಸಂಬಂಧಿಕರೆಲ್ಲ ಸೇರಿ ರಾಜಶೇಖರ್ ಅವರನ್ನು ಹುಡುಕಾಡಲು ಆರಂಭಿಸಿದರು.

ರಸ್ತೆ ಪಕ್ಕದಲ್ಲಿ ಮೃತದೇಹ
ಕೆಲವು ಸಮಯದ ಬಳಿಕ ರಸ್ತೆಯ ಮಧ್ಯೆದಲ್ಲಿ ರಾಜಶೇಖರ್ ಅವರ ಬೈಕ್ ಮತ್ತು ಫೋನ್ ಪತ್ತೆಯಾಯಿತು. ಸಮೀಪದಲ್ಲಿ ಹುಡುಕಾಡಿದಾಗ ಆತನ ಕೈಕಾಲುಗಳನ್ನು ಮರಕ್ಕೆ ಕಟ್ಟಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಯಿತು. ಬಳಿಕ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಲಾಯಿತು. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಣಕ್ಕಾಗಿ ಕೊಲೆ
ಪ್ರಾಥಮಿಕ ತನಿಖೆಯ ಪ್ರಕಾರ ಟೊಮ್ಯಾಟೋ ಮಾರಿ ಗಳಿಸಿದ್ದ ಹಣವನ್ನು ಸುಲಿಗೆ ಮಾಡಲು ಬಂದ ದುಷ್ಕರ್ಮಿಗಳು ರಾಜಶೇಖರ್ರನ್ನು ಕೊಲೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಇದೀಗ ರಾಜಶೇಖರ್ ಹತ್ಯೆ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಪತ್ನಿ ಜ್ಯೋತಿ, ಮಕ್ಕಳಾದ ಬಿಂದು ಮತ್ತು ಕೃತಿಯನ್ನು ರಾಜಶೇಖರ್ ಅಗಲಿದ್ದಾರೆ. ಮಕ್ಕಳಿಬ್ಬರು ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಶೇ. 300 ರಷ್ಟು ಏರಿಕೆ ಪ್ರತಿಕೂಲ ವಾತಾವರಣ ಪರಿಣಾಮ ಟೊಮ್ಯಾಟೋ ಬೆಲೆ ಏರಿಕೆಯಾಗಿದೆ. ಶೇ. 300 ರಷ್ಟು ಬೆಲೆ ಏರಿಕೆಯಾಗಿದೆ ಎಂದು ಗ್ರಾಹಕರ ವ್ಯವಹಾರಗಳ ಇಲಾಖೆ ತಿಳಿಸಿದೆ. ಈ ವರ್ಷದ ಆರಂಭದಲ್ಲಿ ಕೆಜಿಗೆ 24 ರೂಪಾಯಿ ಇದ್ದ ಟೊಮ್ಯಾಟೋ ಇದೀಗ ಕೆಜಿಗೆ 108 ರೂ. ತಲುಪಿದೆ. ದೇಶದಲ್ಲಿ ಮಳೆ ಮುಂದುವರಿದರೆ ಟೊಮ್ಯಾಟೋ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಟೊಮ್ಯಾಟೋ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಹಲವೆಡೆ ಟೊಮ್ಯಾಟೋ ಕಳ್ಳತನ ಪ್ರಕರಣಗಳು ಸಹ ವರದಿಯಾಗುತ್ತಿವೆ.