ಡೈಲಿ ವಾರ್ತೆ: 14 ಜುಲೈ 2023
ಪ್ರಧಾನಿ ಮೋದಿಗೆ ಫ್ರಾನ್ಸ್‌ನ ಅತ್ಯುನ್ನತ ಗೌರವ
ಪ್ಯಾರಿಸ್: ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಗುರುವಾರ (ಸ್ಥಳೀಯ ಕಾಲಮಾನ) ದೇಶದ ಅತ್ಯುನ್ನತ ಪುರಸ್ಕಾರವಾದ ‘ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್’ ಅನ್ನು ನೀಡಿ ಗೌರವಿಸಿದ್ದಾರೆ.
ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಫ್ರಾನ್ಸ್‌ನ ಅತ್ಯುತ್ತಮ ಗೌರವ ಪ್ರಶಸ್ತಿಯಾಗಿದೆ. ಫ್ರಾನ್ಸ್ ಸರ್ಕಾರ ಭಾರತದ ಪ್ರಧಾನಿಗೆ ಈ ಪುರಸ್ಕಾರವನ್ನು ನೀಡುವ ಮೂಲಕ ಗೌರವಿಸಿದೆ. ಮಾತ್ರವಲ್ಲದೇ ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಪ್ರಧಾನಿ ಮೋದಿ ಆಗಿದ್ದಾರೆ.
2 ದಿನಗಳ ಪ್ಯಾರಿಸ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಯಿತು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹಾಗೂ ಪ್ರಥಮ ಮಹಿಳೆ ಬ್ರಿಗಿಟ್ಟೆ ಮ್ಯಾಕ್ರನ್ ಅವರು ಎಲಿಸೀ ಅರಮನೆಯಲ್ಲಿ ಮೋದಿ ಅವರಿಗೆ ಖಾಸಗಿ ಔತಣಕೂಟವನ್ನು ಏರ್ಪಡಿಸಿದ್ದರು. ಬಳಿಕ ಅರಮನೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೋದಿ ಅವರಿಗೆ ಫ್ರಾನ್ಸ್‌ನ ಅತ್ಯುನ್ನತ ಪುರಸ್ಕಾರ ನೀಡಲಾಯಿತು.
ಶುಕ್ರವಾರದಂದು ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯಲ್ಲಿ ಮೋದಿ ಗೌರವ ಅತಿಥಿಯಾಗಿ ಮ್ಯಾಕ್ರನ್ ಜೊತೆ ಭಾಗವಹಿಸಲಿದ್ದಾರೆ.