ಡೈಲಿ ವಾರ್ತೆ:15 ಜುಲೈ 2023

ಫ್ರಾನ್ಸ್ :ಅತ್ಯುನ್ನತ ಗೌರವ ಪಡೆದ ಭಾರತದ ಮೊದಲ ಪ್ರಧಾನಿ ಮೋದಿ

ಪ್ಯಾರಿಸ್‌: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫ್ರಾನ್ಸ್‌ನ ಅತ್ಯುನ್ನತ ನಾಗರಿಕ ಹಾಗೂ ಸೇನಾ ಪ್ರಶಸ್ತಿಯಾದ “ಗ್ರ್ಯಾಂಡ್‌ ಕ್ರಾಸ್‌ ಆಫ್ ದಿ ಲೀಜನ್‌ ಆಫ್ ಆನರ್‌’ ನೀಡಿ ಗೌರವಿಸಲಾಯಿತು.

ಈ ಮೂಲಕ ಈ ಪ್ರಶಸ್ತಿಗೆ ಭಾಜನರಾದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾದರು.
ಪ್ಯಾರಿಸ್‌ನ ಎಲಿಸೀ ಅರಮನೆಯಲ್ಲಿ ಜರಗಿದ ಸಮಾರಂಭದಲ್ಲಿ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರಾನ್‌ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಇದುವರೆಗೆ ಈ ಪ್ರಶಸ್ತಿಯು ದಕ್ಷಿಣ ಆಫ್ರಿಕಾ ಮಾಜಿ ಅಧ್ಯಕ್ಷ ನೆಲ್ಸನ್‌ ಮಂಡೇಲಾ, ಅಂದಿನ ವೇಲ್ಸ್‌ ರಾಜಕುಮಾರ ಕಿಂಗ್‌ ಚಾರ್ಲ್ಸ್‌, ಜರ್ಮನಿಯ ಮಾಜಿ ಚಾನ್ಸಲರ್‌ ಆಂಜೆಲಾ ಮಾರ್ಕೆಲ್‌, ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಬೌಟ್ರೋಸ್‌ ಬೌಟ್ರೋಸ್‌ ಘಾಲಿ ಅವರಿಗೆ ಮಾತ್ರ ಪ್ರದಾನ ಮಾಡಲಾಗಿದೆ.

“ಅತ್ಯಂತ ನಮ್ರತೆಯಿಂದ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ. ಇದು 140 ಕೋಟಿ ಭಾರತೀ ಯರಿಗೆ ಸಂದ ಗೌರವವಾಗಿದೆ. ಇದಕ್ಕಾಗಿ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರಾನ್‌, ಫ್ರಾನ್ಸ್‌ ಸರಕಾರ‌ ಮತ್ತು ಇಲ್ಲಿನ ನಾಗರಿಕರಿಗೆ ಧನ್ಯವಾದಗಳು. ಇದು ಭಾರತದ ಕಡೆಗೆ ಫ್ರಾನ್ಸ್‌ನ ಆಳವಾದ ಪ್ರೀತಿಯನ್ನು ತೋರುತ್ತದೆ ಮತ್ತು ನಮ್ಮ ರಾಷ್ಟ್ರದೊಂದಿಗೆ ಸ್ನೇಹವನ್ನು ಹೆಚ್ಚಿಸುವ ಸಂಕಲ್ಪವನ್ನು ತೋರುತ್ತದೆ,’ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

ಇನ್ನೊಂದೆಡೆ “ಪ್ರಧಾನಿ ನರೇಂದ್ರ ಮೋದಿ ಅವರಿಗೆ “ಗ್ರ್ಯಾಂಡ್‌ ಕ್ರಾಸ್‌ ಆಫ್ ದಿ ಲೀಜನ್‌ ಆಫ್ ಆನರ್‌’ ನೀಡಿ ಗೌರವಿಸಿರುವುದು, ಭಾರತ-ಫ್ರಾನ್ಸ್‌ ಬಾಂಧವ್ಯಕ್ಕೆ ಮೋದಿ ಅವರ ಬದ್ಧತೆಗೆ ದೊರೆತ ಮನ್ನಣೆಯಾಗಿದೆ. ಇದು ಅವರ ಅಂತಾರಾಷ್ಟ್ರೀಯ ನಿಲುವು ಮತ್ತು ಪ್ರಮುಖ ಜಾಗತಿಕ ಸಮಸ್ಯೆಗಳನ್ನು ಪರಿಹರಿಸು ವಲ್ಲಿ ಅವರ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಅವರ ನಾಯಕತ್ವವು ಅನೇಕರಿಗೆ ಸ್ಫೂರ್ತಿಯಾಗಿದೆ. ಈ ಗೌರವಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆಗಳು’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಟ್ವೀಟ್‌ ಮಾಡಿದ್ದಾರೆ.

ಉಡುಗೊರೆ ನೀಡಿದ ಮ್ಯಾಕ್ರಾನ್‌
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಫ್ರಾನ್ಸ್‌ ಅಧ್ಯಕ್ಷ ಎಮಾನ್ಯು ಯೆಲ್‌ ಮ್ಯಾಕ್ರಾನ್‌ ಹಲವು ಕೃತಿಗಳು, ಫೋಟೋಗ್ರಾಫ್ ಮತ್ತು ಚಾರ್ಲ್ಮ್ಯಾಗ್ನೆ ಚೆಸ್‌ಮೆನ್‌ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದರು. ಮಾರ್ಸೆಲ್‌ ಪ್ರೌಸ್ಟ್‌ “ಇನ್‌ ಸರ್ಚ್‌ ಆಫ್ ಲಾಸ್ಟ್‌ ಟೈಮ್‌’ ಸಹಿತ 1913ರಿಂದ 1927ರವೆರೆಗೆ ಪ್ರಕಟವಾದ ಕೃತಿಗಳು, ಪ್ಯಾರಿಸ್‌ ವ್ಯಕ್ತಿಯೊಬ್ಬ ಸಿಕ್ಖ್ ಮಿಲಿಟರಿ ಅಧಿಕಾರಿಗೆ ಹೂಗಳನ್ನು ನೀಡುತ್ತಿರುವ ಫೋಟೋ ಅನ್ನು ಉಡುಗೊರೆಯಾಗಿ ನೀಡಲಾ ಯಿತು. 1916ರ ಜು.14ರಂದು ನಡೆದ ಮಿಲಿಟರಿ ಪರೇಡ್‌ನ‌ಲ್ಲಿ ಈ ಫೋಟೋ ಅನ್ನು ಎಲಿಸೀಸ್‌ ಕ್ಲಿಕ್ಕಿಸಿದ್ದರು. ಆ ಸಮಯಲ್ಲಿ ಫ್ರಾನ್ಸ್‌ನಲ್ಲಿ ಇಂಡಿಯನ್‌ ಎಕ್ಸ್‌ಪಿಡೀಟನರಿ ಫೋರ್ಸ್‌(ಐಇಎಫ್)ನ ಭಾರತೀಯ ಯೋಧರನ್ನು ಬ್ರಿಟಿಷ್‌ ಸರಕಾರ‌ ನಿಯೋಜಿಸಿತ್ತು.

ಪ್ರಮುಖರ ಜತೆ ಮಾತುಕತೆ
ಪ್ರಧಾನಿ ಮೋದಿ ಅವರು ಫ್ರೆಂಚ್‌ ಸಂಸತ್‌ ಅಧ್ಯಕ್ಷ ಯೇಲ್‌ ಬ್ರಾನ್‌ ಪಿವೆಟ್‌ ಅವರು ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು ಚಾನಲ್‌ ಸಂಸ್ಥೆಯ ಸಿಇಒ ಲೀನಾ ನಾಯರ್‌, 99 ವರ್ಷದ ಯೋಗ ಪಟು ಷಾರ್ಲೆಟ್‌ ಚಾಪಿನ್‌ ಸಹಿತ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು. “ಚಾನಲ್‌ ಸಂಸ್ಥೆಯ ಸಿಇಒ ಲೀನಾ ನಾಯರ್‌ ಅವರೊಂದಿಗೆ ಮಾತುಕತೆ ನಡೆಸಲಾ ಯಿತು. ಈ ವೇಳೆ ಖಾದಿ ಉತ್ಪನ್ನಗಳನ್ನು ಹೆಚ್ಚು ಜನ ಪ್ರಿಯಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾ ಯಿತು’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಇಂದು ಪ್ರಧಾನಿ ಯುಎಇಗೆ
ಎರಡು ದಿನಗಳ ಫ್ರಾನ್ಸ್‌ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಪ್ರಧಾನಿ ಯುಎಇ ಗೆ ತೆರಳಿದರು. ಶನಿವಾರ ಅವರು ಅಬುಧಾಬಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಯುಎಇ ಅಧ್ಯಕ್ಷ ಮತ್ತು ಅಬುಧಾಬಿ ದೊರೆ ಶೇಖ್‌ ಮೊಹಮ್ಮದ್‌ ಬಿನ್‌ ಜಾಯೆದ್‌ ಅಲ್‌ ನೆಹ್ಯಾನ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. “ನನ್ನ ಸ್ನೇಹಿತ ಶೇಖ್‌ ಮೊಹಮ್ಮದ್‌ ಅವರನ್ನು ಭೇಟಿಯಾಗಲು ಕಾತುರವಾಗಿ ಕಾಯುತ್ತಿದ್ದೇನೆ. ವ್ಯಾಪಾರ, ಹೂಡಿಕೆ, ಇಂಧನ, ಆಹಾರ ಭದ್ರತೆ, ಶಿಕ್ಷಣ, ರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ-ಅಬುಧಾಬಿ ಪರಸ್ಪರ ಸಹಭಾ ಗಿತ್ವ ಹೊಂದಿವೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.