ಡೈಲಿ ವಾರ್ತೆ: 15 ಜುಲೈ 2023
ಮಂಗಳೂರು:ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು, ಪ್ರಯಾಣಿಕರು ಪಾರು!
ಮಂಗಳೂರು: ಅತಿವೇಗದಿಂದ ಚಲಾಯಿಸಿಕೊಂಡು ಬಂದಿರುವ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪ್ರಪಾತಕ್ಕೆ ಬೀಳುವುದರಿಂದ ಸ್ವಲ್ಪದರಲ್ಲಿ ತಪ್ಪಿದ ಘಟನೆ ಶುಕ್ರವಾರ ತಡರಾತ್ರಿ ನಗರದ ಸರ್ಕ್ಯೂಟ್ ಹೌಸ್ ಬಳಿ 12.30 ರ ಸುಮಾರಿಗೆ ಸಂಭವಿಸಿದೆ.
ಕದ್ರಿಯ ಸರ್ಕ್ಯೂಟ್ ಹೌಸ್ ನಿಂದ ಬಿಜೈ ರೋಡ್ ನಡುವಿನ ಬಟ್ಟಗುಡ್ಡೆ ಬಳಿ ಈ ಕಾರು ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಅಲ್ಪಸ್ವಲ್ಪಗಾಯಗಳೊಂದಿಗೆ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಸರ್ಕ್ಯೂಟ್ ಹೌಸ್ ನಿಂದ ಬಿಜೈ ಕಡೆಗೆ ಈ ಮಾರುತಿ ಬಲೇನೋ ಕಾರು ಅತಿ ವೇಗದಿಂದ ಚಲಿಸುತ್ತಾ ಬಂದಿದೆ. ಆದರೆ ಬಟ್ಟಗುಡ್ಡೆ ಸಮೀಪಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್ ಮಧ್ಯೆಯಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆ ಪಕ್ಕದ ಪ್ರಪಾತದ ಅಂಚಿಗೆ ಬಂದು ನಿಂತಿದೆ.
ಪ್ರಪಾತದ ಸನಿಹದಲ್ಲೇ ಕುರುಚಲು ಪೊದೆಯಿದ್ದಿದ್ದರಿಂದ ಕಾರು ಅದರ ಮಧ್ಯೆ ಸಿಲುಕಿಕೊಂಡಿದೆ. ಇದು ಕಾರು ಪ್ರಪಾತಕ್ಕೆ ಬೀಳುವುದನ್ನು ತಪ್ಪಿಸಿದಂತಾಗಿದೆ. ಕಾರು ಢಿಕ್ಕಿ ಹೊಡೆದ ರಭಸಕ್ಕೆ ಡಿವೈಡರ್ ಮಧ್ಯೆಯಿರುವ ವಿದ್ಯುತ್ ಕಂಬ ಕಿತ್ತು ಅನತಿ ದೂರದಲ್ಲಿ ಬಿದ್ದಿದೆ. ಆದರೆ ಕಾರಿನೊಳಗಿದ್ದ ಮೂವರೂ ಯಾವುದೇ ಜೀವಾಪಾಯಗಳಿಲ್ಲದೆ ಪಾರಾಗಿದ್ದಾರೆ. ಈ ಬಗ್ಗೆ ಕದ್ರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.