ಡೈಲಿ ವಾರ್ತೆ: 25 ಜುಲೈ 2023

ಸುರತ್ಕಲ್:ಹೊಸಬೆಟ್ಟು ಕಾರ್ ಮಾರ್ಟ್ ನ ಕಾರು ಕಳವು ಪ್ರಕರಣ – ಅಪ್ರಾಪ್ತ ಬಾಲಕನ ಸಹಿತ ಇಬ್ಬರು ಆರೋಪಿಗಳ ಬಂಧನ

ಸುರತ್ಕಲ್: ಸುರತ್ಕಲ್ ಪೋಲಿಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟಿನ ಕಾರ್ ಮಾರ್ಟ್ ಹೆಸರಿನ ಹಳೆಯ ವಾಹನಗಳ ಖರೀದಿ ಮತ್ತು ಮಾರಾಟದ ಶೋರೂಂಗೆ ನುಗ್ಗಿ ಎರಡು ಕಾರ್ ಸಹಿತ ಹಲವು ಸೊತ್ತುಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಬಾಲಕನ ಸಹಿತ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಕಿನ್ನಿಪದವು ನಿವಾಸಿ ಮಹಮ್ಮದ್ ಶಫೀಕ್ (21) ಎಂದು‌ ಗುರುತಿಸಲಾಗಿದೆ.
ಕಳೆದ ಜುಲೈ 12ರ ರಾತ್ರಿ ಹೊಸಬೆಟ್ಟಿನ ಕಾರ್ ಮಾರ್ಟ್ ಶೋರೂಂನ ಕಛೇರಿಯ ಗ್ಲಾಸ್ ನ ಡೋರ್ ನ್ನು ಸುತ್ತಿಗೆಯಿಂದ ಜಖಂಗೊಳಿಸಿ ಸಂಪೂರ್ಣ ಪುಡಿ ಮಾಡಿ ಒಳಪ್ರವೇಶಿಸಿ ಕಛೇರಿಯೊಳಗೆ ಟೇಬಲ್ ಮೇಲೆ ಇದ್ದ ಒನ್ ಪ್ಲಾಸ್ ಮೊಬೈಲ್ ಫೋನ್ HP ಕಂಪನಿಯ ಲ್ಯಾಪ್ ಟಾಪ್ ಹಾಗೂ HP ಕಂಪನಿಯ ಪ್ರಿಂಟ‌ರ್ ಹಾಗೂ ಶೋರೂಂನ ಪಾರ್ಕ್ ನಲ್ಲಿ ನಿಲ್ಲಿಸಿದ ಕ್ರೆಟಾ ಕಾರು ಹಾಗೂ ಸ್ವಿಫ್ಟ್ ಕಾರು ಕಳವು ಮಾಡಿದ್ದರು. ಕಾರ್ ಮಾರ್ಟ್ ಮಾಲಕ ಅಬೀದ್ ಅಹಮ್ಮದ್ ಸೂರಲ್ಪಾಡಿ ಇವರು ನೀಡಿದ ದೂರಿನಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದಿನಾಂಕ 22-07-2023 ರಂದು ಅಪ್ರಾಪ್ತ ಬಾಲಕನೊಬ್ಬನಿಂದ ಕಳವಾದ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆಯಲಾಗಿರುತ್ತದೆ. ಆತ ನೀಡಿದ ಮಾಹಿತಿಯಂತೆ ಮಂಗಳೂರು ತಾಲೂಕಿನ ಕಿನ್ನಿಪದವು ವಾಸಿ ಪ್ರಾಯ: 21 ವರ್ಷದ ಮಹಮ್ಮದ್ ಶಫೀಕ್ ಎಂಬಾತನು ದ್ವಿಚಕ್ರದಲ್ಲಿ ಬರುವಾಗ ಮರಕಡ ಬಸ್ ನಿಲ್ದಾಣದ ಬಳಿ ಬಂಧಿಸಿ, ಆತನು ತೋರಿಸಿಕೊಟ್ಟಂತೆ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿಯಲ್ಲಿ ಕ್ರೆಟಾ ಕಾರನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸುತ್ತಿಗೆ, ಕೃತ್ಯದ ಸಮಯ ತಲೆಗೆ ಧರಿಸಿದ ಹೆಲೈಟ್ ಮೈ ಮೇಲೆ ಧರಿಸಿದ ರೈನ್ ಕೋಟ್, ಕೈಗೆ ಧರಿಸಿದ ಗೌಸ್, ಮುಖಕ್ಕೆ ಹಾಕಿದ ಮಾಸ್ಕ್ ಅನ್ನು ವಶಕ್ಕೆ ಪಡೆಯಲಾಗಿರುತ್ತದೆ.

ಆರೋಪಿ ಮಹಮ್ಮದ್ ಶಫೀಕ್ ಅಲಿಯಾಸದ ಶಫೀಕ್ ನು ಒಂದು ವರ್ಷದ ಹಿಂದೆ ಮೂಡಬಿದ್ರಿ ಠಾಣಾ ವ್ಯಾಪ್ತಿಯ ಕೆಸರುಗದ್ದೆ ಎಂಬಲ್ಲಿ ಮನೆಯಿಂದ ಕಳ್ಳತನ ಮಾಡಿದ ದ್ವಿಚಕ್ರ ವಾಹನವನ್ನೂ ಆತನಿಂದ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ವಾಹನಗಳ ಒಟ್ಟು ಅಂದಾಜು ಮೌಲ್ಯ ರೂ 15.50 ಲಕ್ಷ ಎಂದು‌ ಅಂದಾಜಿಸಲಾಗಿದೆ. ಆರೋಪಿ ಮಹಮ್ಮದ್ ಶಫೀಕ್ ಅಲಿಯಾಸ್ ಶಫೀಕ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣದ ವಿಚಾರಣೆಯ ಬಗ್ಗೆ 3 ದಿನಗಳ ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಕಳವು ಪ್ರಕರಣದ ಪತ್ತೆ ಕಾರ್ಯಾಚರಣೆಯಲ್ಲಿ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕರಾದ ಮಹೇಶ್ ಪ್ರಸಾದ್‌ ರವರ ನೇತೃತ್ವದಲ್ಲಿ ಪಿಎಸ್‌ಐ ಗಳಾದ ರಘು ನಾಯಕ್, ಅರುಣ್ ಕುಮಾರ್, ಎಎಸ್‌ಐ, ತಾರನಾಥ ಹೆಡ್ ಕಾನ್ ಸ್ಟೇಬಲ್ ಗಳಾದ ಅಣ್ಣಪ್ಪ, ಉಮೇಶ್, ಕಾನ್ಸ್ಟೇಬಲ್ ಗಳಾದ ಕಾರ್ತೀಕ್, ಸುನೀಲ್, ಮಂಜುನಾಥ, ನಾಗರಾಜ ಇವರು ಪಾಲ್ಗೊಂಡಿದ್ದರು.