ಡೈಲಿ ವಾರ್ತೆ: 25 ಜುಲೈ 2023

ಕುಂದಾಪುರ: ಬಿರುಸಿನ ಗಾಳಿ – ಮಳೆಗೆ ಹಂಚಿನ ಕಾರ್ಖಾನೆ ಛಾವಣಿ ಕುಸಿತ!

ಕುಂದಾಪುರ : ಕಳೆದ ಮೂರ್ನಾಲ್ಕು ದಿನಗಳಿಂದ ಕುಂದಾಪುರ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು, ಕಡಲು ಮತ್ತು ನದಿ ದಡಗಳ ಪ್ರದೇಶಗಳಲ್ಲಿ ನೆರೆ ಉಕ್ಕಿದೆ. ಕಾಲುವೆ, ತೋಡುಗಳು ತುಂಬಿ ಹರಿಯುತ್ತಿದ್ದು, ಕೃಷಿ ಗದ್ದೆಗಳು ಜಲಾವೃತವಾಗಿ ಬತ್ತದ ಪೈರು ಕೊಳೆಯುವ ಆತಂಕ ಸೃಷ್ಟಿಸಿದೆ. ಮಳೆಯೊಂದಿಗೆ ಆಗಾಗ ಭಾರೀ ಬಿರುಗಾಳಿಯೂ ಬೀಸುತ್ತಿದ್ದು, ಹಲವೆಡೆ ಕಟ್ಟಡ ಕುಸಿತ, ಮೇಲ್ಚಾವಣಿಗೆ ಹಾನಿ ಸಂಭವಿಸಿದೆ. ಸೋಮವಾರ ಮಧ್ಯರಾತ್ರಿ ವೇಳೆ ಬೀಸಿದ ಬಿರುಗಾಳಿಯಿಂದಾಗಿ ಕಾವ್ರಾಡಿ ಗ್ರಾಮದ ನೆಲ್ಲಿಕಟ್ಟೆಯ ಗಿರಿಜಾ ಹಂಚಿನ ಕಾರ್ಖಾನೆಯ ಮೇಲ್ ಛಾವಣಿ ಕುಸಿದುಬಿದ್ದು ಅಪಾರ ನಷ್ಟ ಸಂಭವಿಸಿದೆ.

ಹಗಲು ಕಾರ್ಖಾನೆಯಲ್ಲಿ ಕೆಲಸ ನಡೆಯುತ್ತಿದ್ದ ಹೊತ್ತಿನಲ್ಲಿ ಇಂತಹ ಘಟನೆ ಸಂಭವಿಸಿದ್ದರೆ, ಪ್ರಾಣಹಾನಿಯೇ ಮೊದಲಾದ ದೊಡ್ಡ ದುರಂತ ಉಂಟಾಗುತ್ತಿತ್ತು. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ನಷ್ಟದ ಅಂದಾಜು ಮಾಡಲಾಗುತ್ತಿದೆ.

ಕೋಡಿಯ ಸೀ – ವಾಕ್ ಪ್ರದೇಶಕ್ಕೆ ಬಲವಾದ ಕಡಲ ಅಲೆಗಳು ಬಡಿಯುತ್ತಿದ್ದು, ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ. ಕೊಲ್ಲೂರಿನ ಜಲಪಾತಕ್ಕೆ ಓರ್ವ ಬಲಿಯಾಗಿದ್ದು, ಬೇರೊಂದು ಘಟನೆಯಲ್ಲಿ ಇನ್ನೊರ್ವ ಯುವಕ ಕಾಣೆಯಾಗಿದ್ದಾನೆ. ಮಳೆ ಬಿರುಸುಗೊಳ್ಳುತ್ತಿದ್ದು, ಚಳಿಯ ವಾತಾವರ್ಣ ಉಂಟಾಗಿದೆ.