ಡೈಲಿ ವಾರ್ತೆ:26 ಜುಲೈ 2023
ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ: ಕೋಮು ಬಣ್ಣ ನೀಡಲು ಪ್ರಯತ್ನಿಸಿದ ರಶ್ಮಿ ಸಾಮಂತ್!
ಉಡುಪಿ: ಪ್ಯಾರಾಮೆಡಿಕಲ್ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ವೀಡಿಯೋ ವಿಶ್ರಾಂತಿ ಕೊಠಡಿಯಲ್ಲಿದ್ದ ಸಹ ವಿದ್ಯಾರ್ಥಿನಿಯ ವೀಡಿಯೊ ಮಾಡಿದ ಹಾಗೂ ಅನಂತರ ಅದನ್ನು ಅಳಿಸಿದ್ದಾರೆ ಎಂದು ಹೇಳಲಾದ ಉಡುಪಿ ಘಟನೆಯ ಕುರಿತು ಹಿಂದೂ ಹಕ್ಕುಗಳ ಹೋರಾಟಗಾರ್ತಿ ರಶ್ಮಿ ಸಾಮಂತ್ ತನ್ನ ಟ್ವಿಟರ್ ಖಾತೆಯಲ್ಲಿ ದಾರಿ ತಪ್ಪಿಸುವ ಸುಳ್ಳು ಮಾಹಿತಿ ನೀಡಿದ್ದರ ಪರಿಣಾಮ ತಣ್ಣಗಾಗಿದ್ದ ಘಟನೆಗೆ ಕೋಮು ಸೂಕ್ಷ್ಮ ಪ್ರದೇಶವಾದ ಉಡುಪಿಯಲ್ಲಿ ರಾಜಕೀಯ ಕೇಸರೇಚಾಟಕ್ಕೆ ವೇದಿಕೆ ಸಿದ್ಧ ಮಾಡಿಕೊಟ್ಟಾಂತಾಗಿದೆ.
ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಕಳೆದ ವಾರ ಆರಂಭದಲ್ಲಿ ಗಮನ ಸೆಳೆದಿತ್ತು. ಬಳಿಕ ಹಿಂದೂ ಸಂಘಟನೆಯ ಕಾರ್ಯಕರ್ತರು ತಪ್ಪು ಮಾಹಿತಿ ನೀಡುವ ಮೂಲಕ ಇದಕ್ಕೆ ಕೋಮು ಬಣ್ಣ ಹಚ್ಚಲು ಪ್ರಯತ್ನ ಪಟ್ಟರು. ಆದರೇ ಅದು ಫಲಪ್ರದ ಆಗದಾಗ ಸ್ವಯಂ ಘೋಷಿಸಿತ ಹಿಂದೂ ಹಕ್ಕುಗಳ ಹೋರಾಟರ್ಗಾತಿ ರಶ್ಮಿ ಸಾವಂತ್ ಟ್ವಿಟ್ ಮಾಡುವ ಮೂಲಕ ಈ ಘಟನೆಯನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡಯ್ಯುವಂತೆ ಮಾಡಿದರು.
ರಶ್ಮಿ ಸಾವಂತ್ ಅವರ ಟ್ವಿಟ್‌ನಲ್ಲಿ ಉಡುಪಿ ಪೊಲೀಸರು ಮೂವರು ಆರೋಪಿ ವಿದ್ಯಾರ್ಥಿನಿಯರು “ನೂರಾರು ಹಿಂದೂ ಹುಡುಗಿಯರ ಖಾಸಗಿ ವಿಡಿಯೋ ರೆಕಾರ್ಡ್ ಮಾಡಲು ತಮ್ಮ ಕಾಲೇಜಿನ ಮಹಿಳಾ ಶೌಚಾಲಯಗಳಲ್ಲಿ ಕ್ಯಾಮೆರಾಗಳನ್ನು ಇರಿಸಿದ್ದಾರೆ, ಚಿತ್ರೀಕರಿಸಿದ ವಿಡಿಯೋಗಳು ಮತ್ತು ಫೋಟೋಗಳನ್ನು ಮುಸ್ಲಿಂ ವಿದ್ಯಾರ್ಥಿನಿಯರು ಸಮುದಾಯದ ವಾಟ್ಸಾಪ್ ಗುಂಪುಗಳಲ್ಲಿ ಹಂಚಿದ್ದಾರೆ” ಎಂದು ಬರೆದುಕೊಂಡಿದ್ದರು. ಆದರೆ, ಇವುಗಳನ್ನೆಲ್ಲಾ ಸ್ವತಃ ಉಡುಪಿ ಜಿಲ್ಲಾ ಪೊಲೀಸ್ ಪರಿಷ್ಠಾಧಿಕಾರಿ ಅಕ್ಷಯ್ ಹಾಕಿ ಮಚ್ಛೇಂದ್ರ ಅವರೇ ತಳ್ಳಿ ಹಾಕಿದ್ದಾರೆ.
ಪತ್ರಿಕಾಗೋಷ್ಠಿ ಕರೆದು ಸಾಮಾಜಿಕ ಮಾಧ್ಯಮದಲ್ಲಿ ಹರಡಲಾಗುತ್ತಿದ್ದ ವದಂತಿಗಳನ್ನು ಎಸ್‌ಪಿ ನಿರಾಕರಿಸಿದ್ದು, ಆರೋಪಿ ವಿದ್ಯಾರ್ಥಿನಿಯರು ಹಾಗೂ ಚಿತ್ರೀಕರಿಸಿದ ಹುಡುಗಿ ಪರಿಚಯಸ್ಥರಾಗಿದ್ದು, ತಮಾಷೆಗಾಗಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ ಆರೋಪಿತ ವಿದ್ಯಾರ್ಥಿನಿಯರು ನಂತರ ವೀಡಿಯೊವನ್ನು ಅಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ, ಯಾರಿಗೂ ಬ್ಲಾಕ್ ಮೇಲ್ ಮಾಡಿಲ್ಲ ಅಥವಾ ಕಿರುಕುಳ ನೀಡಿಲ್ಲ ಎಂದು ಎಸ್ಪಿ ಹೇಳಿದ್ದಾರೆ. ರೆಸ್ಟ್ ರೂಂನಲ್ಲಿ ಯಾವುದೇ ಹಿಡನ್ ಕ್ಯಾಮೆರಾಗಳನ್ನು ಇರಿಸಲಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ವೀಡಿಯೊಗಳಲ್ಲಿ ಕಾಣಿಸಿಕೊಂಡಿರುವ ಅನೇಕ ಹುಡುಗಿಯರು ಖಿನ್ನತೆಯಿಂದ ಬಳಲುತ್ತಿದ್ದು, ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ರಶ್ಮಿ ಸಾಮಂತ್ ಹೇಳಿದ್ದರು. ಆದರೆ, ಪೊಲೀಸ್ ವಿವರಣೆಯಲ್ಲಿ ಅಂತಹ ಯಾವುದೇ ವಿಷಯವನ್ನು ಉಲ್ಲೇಖಿಸಿಲ್ಲ. ಈ ಘಟನೆಯಲ್ಲಿ ಕೇವಲ ಒಬ್ಬ ಹುಡುಗಿಯನ್ನು ಮಾತ್ರ ಚಿತ್ರೀಕರಿಸಲಾಗಿದೆ. ಇದುವರೆಗಿನ ತನಿಖೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಂತೆ ಚಿತ್ರೀಕರಿಸಲ್ಪಟ್ಟ ಹುಡುಗಿಯ ವಿಡಿಯೋಗಳು ಎಲ್ಲಿಯೂ ವೈರಲ್ ಆಗಿಲ್ಲ ಎಂದು ತಿಳಿಸಿದ್ದಾರೆ.
ಆರೋಪಿತ ವಿದ್ಯಾರ್ಥಿನಿಯರು ಚಿತ್ರೀಕರಿಸಿದ ವೀಡಿಯೊಗಳು ಮತ್ತು ಫೋಟೋಗಳನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದಾರೆ ಎಂಬ ರಶ್ಮಿ ಅವರ ಹೇಳಿಕೆಯನ್ನು ಉಡುಪಿ ಎಸ್ಪಿ ತಳ್ಳಿಹಾಕಿದ್ದಾರೆ.
ಪೊಲೀಸರ ತನಿಖೆಯ ಸಮಯದಲ್ಲಿ ಅಂತಹ ಹಂಚಿಕೆಯ ಬಗ್ಗೆ ಯಾವುದೇ ಸಾಕ್ಷಿಗಳು ಸಿಕ್ಕಿಲ್ಲ ಹಾಗೂ ಹುಡುಗಿ ಅಥವಾ ಆಕೆಯ
ಪೋಷಕರೂ ಈ ಬಗ್ಗೆ ಯಾವುದೇ ದೂರು ದಾಖಲಿಸಲಿಲ್ಲ.
ಎಂದು ಎಸ್ಪಿ ಹೇಳಿದ್ದಾರೆ.
ಕಾಲೇಜಿನ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಬಂದಿರುವ ಹೇಳಿಕೆಗಳನ್ನು ನಿರಾಕರಿಸಿದ್ದು, ಈ ಹಿಂದೆ ಕಾಲೇಜಿನಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ. ಆರೋಪಗಳೆಲ್ಲವೂ ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ.
“ಈ ಹಿಂದೆ ಇಲ್ಲಿ ಇಂತಹ ಘಟನೆ ನಡೆದಿತ್ತು ಎಂಬುದು ಸುಳ್ಳು ಸತ್ಯಾಸತ್ಯತೆಯನ್ನು ಅರಿಯದೆ ಯಾರೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಮತ್ತು ಗೊಂದಲಮಯ ವಿಚಾರಗಳನ್ನು ಹಾಕಬಾರದು” ಎಂದು ಅವರು ಹೇಳಿದ್ದಾರೆ.