ಡೈಲಿ ವಾರ್ತೆ:09 ಆಗಸ್ಟ್ 2023

ಸಾಕುನಾಯಿಯನ್ನು ಕಾರಿನಲ್ಲಿ ಬಿಟ್ಟು ವಿಮಾನದಲ್ಲಿ ಹಾರಿದ ಮಾಲೀಕ: ಕಿಟಕಿ ಗಾಜನ್ನೂ ಒಡೆದು ನಾಯಿ ವನ್ನು ರಕ್ಷಿಸಿದ CISF ಸಿಬ್ಬಂದಿ

ದೇವನಹಳ್ಳಿ: ಪ್ರಯಾಣಿಕರೊಬ್ಬರು ಊರಿಗೆ ಹೊರಡುವ ಗಡಿಬಿಡಿಯಲ್ಲಿ ಪಾರ್ಕಿಂಗ್ ಲಾಟ್ನಲ್ಲಿ ಸಾಕುನಾಯಿಯನ್ನು ಬಿಟ್ಟು ಪ್ರಯಾಣಿಸಿರುವ ಘಟನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಪ್ರಕರಣ ಸಂಬಂಧ ನಾಯಿಯ ಮಾಲೀಕ ವಿಕ್ರಂ ರಾಮದಾಸ್ ಲಿಂಗೇಶ್ವರ್(41) ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಘಟನೆಯ ಹಿನ್ನಲೆ:
ಬೆಂಗಳೂರು ಕಲ್ಯಾಣನಗರದ ನಿವಾಸಿ ವಿಕ್ರಂ ರಾಮದಾಸ್ ಲಿಂಗೇಶ್ವರ್ ಸೋಮವಾರ ಕೊಯಮತ್ತೂರಿಗೆ ತೆರಳಬೇಕಿದ್ದ ಕಾರಣ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ನಲ್ಲಿ ಕಾರು ನಿಲ್ಲಿಸಿ ವಿಂಡೋ ಲಾಕ್ ಮಾಡಿ ಅದರಲ್ಲಿಯೇ ತಮ್ಮ ಗ್ರೇಟ್ ಡೇನ್ ತಳಿಯ ಸಾಕು ನಾಯಿಯನ್ನೂ ಬಿಟ್ಟು ತೆರಳಿದ್ದಾರೆ.

ಕಾರಿನ ವಿಂಡೋ ಲಾಕ್ ಮಾಡಿದ್ದ ಪರಿಣಾಮ ಉಸಿರಾಡಲು ಸಾಧ್ಯವಾಗದೆ ನಾಯಿ ತೀವ್ರವಾಗಿ ನಿತ್ರಾಣಗೊಂಡಿತ್ತು. ಎರಡ್ಮೂರು ತಾಸು ಉಸಿರಾಡಲು ಗಾಳಿ ಇಲ್ಲದ ಕಾರಣ ನಾಯಿಯ ಮೂಗಿನಿಂದ ರಕ್ತ ಬರಲು ಶುರುವಾಗಿತ್ತು. ಗಸ್ತಿನಲ್ಲಿದ್ದ CISF ಸಿಬ್ಬಂದಿ ಕಾರಿನಲ್ಲಿ ನಾಯಿ ಬೊಗಳುತ್ತಿರುವುದನ್ನೂ ಗಮನಿಸಿ ಕಿಟಕಿ ಗಾಜನ್ನೂ ಒಡೆದು ಶ್ವಾನವನ್ನು ರಕ್ಷಿಸಿದ್ದಾರೆ.

ನೆರವಾದ ಸಿಬ್ಬಂದಿ
ನಾಯಿಯನ್ನೂ ರಕ್ಷಿಸಿದ ಬಳಿಕ CISF ಸಿಬ್ಬಂದಿ ಚಾರ್ಲಿ ಎಂಬ ಸ್ವಯಂ ಸೇವಾ ಸಂಸ್ಥೆ(NGO)ಗೆ ಕರೆ ಮಾಡಿ ಚಿಕಿತ್ಸೆಗೆ ಕಳುಹಿಸಿಕೊಟ್ಟಿದ್ದಾರೆ. ರಾತ್ರಿ 9 ಘಂಟೆ ಸುಮಾರಿಗೆ ನಾಯಿಯ ಮಾಲೀಕ ವಿಕ್ರಂ ಕೊಯಮತ್ತೂರಿನಿಂದ ವಾಪಸ್ ಆದ ಬಳಿಕ CISF ಸಿಬ್ಬಂದಿ ಆತನನ್ನೂ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

ನಾಯಿ ಮಾಲೀಕನನ್ನೂ ವಶಕ್ಕೆ ಪಡೆದ ಪೊಲೀಸರು ವಿಕ್ರಂ ವಿರುದ್ಧ ಭಾರತೀಯ ದಂಡ ಸಂಹಿತೆ 11(1)(A) ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ. ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ಕೊಟ್ಟು ಸ್ಟೇಷನ್ ಬೇಲ್ ಮೇಲೆ ಬಿಟ್ಟು ಕಳುಹಿಸಿದ್ದಾರೆ. ಅಸ್ವಸ್ಥಗೊಂಡಿದ್ದ ನಾಯಿಗೆ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದೆ ಎಂದು ಭದ್ರತಾ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.