ಡೈಲಿ ವಾರ್ತೆ:15 ಆಗಸ್ಟ್ 2023
ಕೋಟ ಗ್ರಾಮ ಪಂಚಾಯತಿ – ಯೋಧರೊಂದಿಗೆ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಕೋಟ: ಹಲವಾರು ಮಹನೀಯರು ತ್ಯಾಗ ಬಲಿದಾನಗೈದು ,ನಮಗೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದು ,ಸ್ವಾತಂತ್ರ್ಯ ಸೇನಾನಿಗಳು ಹಾಗೂ ನಮ್ಮ ಹಿರಿಯರ ಹೋರಾಟದ ಫಲದಿಂದ ನಮಗೆ ಲಭಿಸಿದ ಸ್ವಾತಂತ್ರ್ಯ ದ ಮೌಲ್ಯವನ್ನು ಇಂದಿನ ಜನಾಂಗ ಅರಿತುಕೊಂಡು ಮುನ್ನೆಡದಾಗ ಮಾತ್ರ ನಿಜವಾದ ಸ್ವಾತಂತ್ರ್ಯಕ್ಕೊಂದು ಅರ್ಥ ಬರುತ್ತದೆಂದು ಕೋಟ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಅಜಿತ್ ದೇವಾಡಿಗ ಹೇಳಿದರು. ಅವರು ಗ್ರಾಮ ಪಂಚಾಯತಿನಲ್ಲಿ 77 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು.
ಆಜಾಧಿ ಕಾ ಅಮೃತ ಮಹೋತ್ಸವದ ಅಂಗವಾಗಿ *ನನ್ನ ಮಣ್ಣು ನನ್ನ ದೇಶ* ಅಭಿಯಾನದಡಿ ದೇಶಕ್ಕಾಗಿ ಪ್ರಾಣತೆತ್ತು ಹುತಾತ್ಮರಾದ ವೀರ ಯೋಧರ ನೆನಪಿಗಾಗಿ ಗ್ರಾಮ ಪಂಚಾಯತಿ ಎದುರು ಕಾಯಕಯೋಗಿ ಬಸವಣ್ಣನವರ ವಚನವನ್ನು , ಮಾನ್ಯ ಪ್ರಧಾನ ಮಂತ್ರಿ ಹಾಗೂ ಮುಖ್ಯ ಮಂತ್ರಿಯವರ ಸಂದೇಶವನ್ನೊಳಗೊಂಡ ಶಿಲಾಫಲಕವನ್ನು ಪಂಚಾಯತಿ ಅಧ್ಯಕ್ಷರು ಹಾಗೂ ಗ್ರಾಮದ ನಿವೃತ್ತ ವೀರಯೋಧ ಹವಾಲ್ದಾರ್ ಯೋಗಿಶ್ ಪಡುಕರೆ ಅನಾವರಣಗೊಳಿಸಿದರು. ಬಳಿಕ ಪಂಚಾಯತ್ ಆವರಣದಲ್ಲಿ ವಸುದಾ ವಂದನ್ -ಕಾರ್ಯಕ್ರಮದ ಅಂಗವಾಗಿ ಅಮೃತ ವಾಟಿಕ ಔಷದೀಯ ಗುಣಗಳನ್ನು ಹೊಂದಿರುವ ಗಿಡಗಳನ್ನು ನೆಡಲಾಯಿತು.
ಮಾತೃಭೂಮಿಯ ಘನತೆ ಹಾಗೂ ಸ್ವಾತಂತ್ರ್ಯ ಕಾಪಾಡಲು ತಮ್ಮ ಪ್ರಾಣ ತ್ಯಾಗ ಮಾಡಿದ ವೀರರಿಗೆ ಪ್ರಣಾಮಗಳನ್ನು ಅರ್ಪಿಸುವ ಸಲುವಾಗಿ ಪಂಚಪ್ರಾಣ ಶಪಥವನ್ನು ಅಧ್ಯಕ್ಷರು ಭೋದಿಸಿದರು.*ವೀರೊಂಕ ಸಮ್ಮಾನ್* ಕಾರ್ಯಕ್ರಮದ ಅಂಗವಾಗಿ ಸೇನೆಯಲ್ಲಿ ಸತತ 17 ವರ್ಷಗಳ ಕಾಲ ಸೇವೆಗೈದ ನಿವೃತ್ತ ಯೋಧ ಯೋಗಿಶ್ ರವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ಇವರು ಕಾನೂನು ಮತ್ತು ಅರಿವು ಕಾರ್ಯಕ್ರಮದ ಭಾಗವಾಗಿ ಸಂವಿಧಾನದಲ್ಲಿ ಉಲ್ಲೇಖಿಸಿದ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಸವಿಸ್ತಾರವಾಗಿ ವಿವರಿಸಿದರು .ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿ ನಿರೂಪಣೆಗೈದರು.. ಕಾರ್ಯದರ್ಶಿ ಶೇಖರ್ ಮರವಂತೆ ಸ್ವಾಗತಿಸಿದರು. ಸಭೆಯಲ್ಲಿ ಉಪಾಧ್ಯಕ್ಷೆ ಜಯಂತಿ ಪೂಜಾರಿ ಸೇರಿದಂತೆ ಪಂಚಾಯತ್ ಸದಸ್ಯರು, ಸಂಜೀವಿನಿ ಸಂಘದ ಅಧ್ಯಕ್ಷರು ,ಪದಾಧಿಕಾರಿಗಳು,ಗ್ರಾಮಸ್ಥರು,ಸಿಬ್ಬಂದಿ ವರ್ಗದವರು ಹಾಜರಿದ್ದರು..