ಡೈಲಿ ವಾರ್ತೆ: 13/NOV/2025

ಕಣ್ತಪ್ಪಿಯಾದ ತಪ್ಪು ಇಡೀ ಬ್ಯಾಂಕನ್ನೇ ದಿವಾಳಿಯಾಗಿಸುತ್ತಿತ್ತಾ? ಕರ್ಣಾಟಕ ಬ್ಯಾಂಕ್​ನ 1,00,000 ಕೋಟಿ ರೂ ಫ್ಯಾಟ್ ಫಿಂಗರ್ ಕಥೆ

ಬೆಂಗಳೂರು: ಇವತ್ತು ಬೆಳಗ್ಗೆಯಿಂದ ಕರ್ಣಾಟಕ ಬ್ಯಾಂಕ್ ಟ್ರೆಂಡಿಂಗ್​ಗೆ ಬಂದಿದೆ. ಸಿಬ್ಬಂದಿಯ ಸಣ್ಣ ಅಚಾತುರ್ಯದಿಂದ ಸಂಭವಿಸಿದ ಒಂದು ತಪ್ಪು ಈಗ ಬ್ಯಾಂಕ್​ನ ಕಾರ್ಯಾಚರಣೆ ನಿರ್ವಹಣಾ ವ್ಯವಸ್ಥೆ ಮೇಲೆ ಅನುಮಾನ ಮೂಡುವಂತೆ ಮಾಡಿದೆ. ಎರಡು ವರ್ಷದ ಹಿಂದೆ ಕರ್ಣಾಟಕ ಬ್ಯಾಂಕ್ ಸುಮಾರು 1,00,000 ಕೋಟಿ ರೂ ಹಣವನ್ನು ತಪ್ಪಾಗಿ ಬೇರೊಂದು ಅಕೌಂಟ್​ಗೆ ವರ್ಗಾವಣೆ ಮಾಡಲಾಗಿತ್ತು. ಅಂದೇ ಅದನ್ನು ಹಿಂಪಡೆಯಲಾಯಿತು. ಈ ರೀತಿ ತಪ್ಪಾಗುವುದು ಸಹಜ. ಇದನ್ನು ಬ್ಯಾಂಕಿಂಗ್ ವಲಯದಲ್ಲಿ ಫ್ಯಾಟ್ ಫಿಂಗರ್ ಎರರ್ (Fat Finger Error) ಎನ್ನುತ್ತಾರೆ. ಕೈತಪ್ಪಿ ಆಗುವ ದೋಷ. ಆದರೆ, ಪ್ರಶ್ನೆ ಎದ್ದಿರುವುದು ಕರ್ಣಾಟಕ ಬ್ಯಾಂಕ್​ನ ಸಿಬ್ಬಂದಿ ಈ ಅಚಾತುರ್ಯ ಘಟನೆಯನ್ನು ಸ್ಪಂದಿಸಿದ ವೇಗ ಮತ್ತು ರೀತಿ ಬಗ್ಗೆ.
ಮನಿ ಕಂಟ್ರೋಲ್ ವೆಬ್​ಸೈಟ್ ಈ ಎಕ್ಸ್​ಕ್ಲೂಸಿವ್ ಸುದ್ದಿಯನ್ನು ಪ್ರಕಟಿಸಿದೆ. ಈ ಬಗ್ಗೆ ಬ್ಯಾಂಕ್​ನಿಂದ ಅಧಿಕೃತ ಹೇಳಿಕೆ ಬಂದಿಲ್ಲ.

1,00,000 ಕೋಟಿ ರೂ ವರ್ಗಾವಣೆ ಆಗಿದ್ದು ನಿಷ್ಕ್ರಿಯ ಖಾತೆಗೆ…
2023ರ ಆಗಸ್ಟ್ 9ರಂದು ಸಂಜೆ 5:17ಕ್ಕೆ ಕರ್ನಾಟಕ ಬ್ಯಾಂಕ್​ನ ಸಿಬ್ಬಂದಿ 1,00,000 ಕೋಟಿ ರೂ ಅನ್ನು ಎಸ್​ಬಿ ಖಾತೆಗೆ ವರ್ಗಾವಣೆ ಮಾಡಿದ್ದರು. ಆ ತಪ್ಪು ಗೊತ್ತಾಗಿ ಅದನ್ನು ವಾಪಸ್ ಪಡೆಯುವಷ್ಟರಲ್ಲಿ ರಾತ್ರಿ 8:09 ಆಗಿ ಹೋಗಿತ್ತು. ಹತ್ತಿರ ಹತ್ತಿರ 3 ಗಂಟೆ ಕಾಲ ಅಷ್ಟು ದೊಡ್ಡ ಮೊತ್ತವು ತಪ್ಪಾದ ಖಾತೆಗೆ ಹೋಗಿಬಿಟ್ಟಿತ್ತು.

ಕರ್ಣಾಟಕ ಬ್ಯಾಂಕ್​ನ ಅದೃಷ್ಟಕ್ಕೆ, ತಪ್ಪಾಗಿ ವರ್ಗಾವಣೆ ಆಗಿದ್ದು ನಿಷ್ಕ್ರಿಯ ಖಾತೆಗೆ. ಡಾರ್ಮಂಟ್ ಅಕೌಂಟ್ ಆಗಿದ್ದರಿಂದ ಸರಿಹೋಯಿತು. ಬ್ಯಾಂಕುಗಳಲ್ಲಿ ಈ ರೀತಿ ಅಚಾತುರ್ಯದಿಂದ ತಪ್ಪಾದ ಅಕೌಂಟ್​ಗೆ ಹಣ ವರ್ಗಾವಣೆ ಆಗುವುದುಂಟು. ಕೆಲವೇ ನಿಮಿಷಗಳಲ್ಲಿ ಅದನ್ನು ಸರಿಪಡಿಸುವುದುಂಟು. ಇಲ್ಲಿ ಕರ್ಣಾಟಕ ಬ್ಯಾಂಕ್ ಈ ತಪ್ಪನ್ನು ಗ್ರಹಿಸಿ ಸರಿಪಡಿಸುವಷ್ಟರಲ್ಲಿ 3 ಗಂಟೆ ಆಗಿತ್ತು. ಒಂದು ವೇಳೆ ಸಕ್ರಿಯ ಖಾತೆಯಾಗಿದ್ದು, ಖಾತೆದಾರರು ಹಣವನ್ನು ಏನು ಬೇಕಾದರೂ ಮಾಡಿಕೊಳ್ಳಬಹುದಿತ್ತು.
ಬ್ಯಾಂಕ್ ಗ್ರಾಹಕರ ಇಡೀ ಹಣವೇ ವರ್ಗಾವಣೆ ಆಗಿತ್ತು…
ಕರ್ಣಾಟಕ ಬ್ಯಾಂಕ್​ನಲ್ಲಿ ಗ್ರಾಹಕರು ಇಟ್ಟಿರುವ ಠೇವಣಿಗಳು ಒಟ್ಟು 1,04,807 ಕೋಟಿ ರೂ. ತಪ್ಪಾಗಿ ವರ್ಗಾವಣೆ ಆದ ಹಣವೂ ಹತ್ತಿರ ಹತ್ತಿರ ಇಷ್ಟೇ ಮೊತ್ತ. ಇಡೀ ಗ್ರಾಹಕರ ಹಣವೇ ತಪ್ಪಾದ ಅಕೌಂಟ್​ಗೆ ವರ್ಗಾವಣೆ ಆಗಿತ್ತು ಎಂಬುದು ಸೋಜಿಗ. ಈ ಹಣ ಕಳೆದುಹೋಗಿದ್ದರೆ ಬ್ಯಾಂಕ್ ದಿವಾಳಿ ಏಳಬಹುದಿತ್ತು.

ಆರು ತಿಂಗಳ ಬಳಿಕ ಮಂಡಳಿ ಗಮನಕ್ಕೆ ಬಂದ ಅಚಾತುರ್ಯ…
ಕರ್ಣಾಟಕ ಬ್ಯಾಂಕ್​ನಲ್ಲಿ ತಪ್ಪು ಸರಿಪಡಿಸಿಕೊಳ್ಳಲು ಆ ಮೂರು ಗಂಟೆ ವಿಳಂಬವಾಗಿದ್ದು ಒಂದೆಡೆ ಇದ್ದರೆ, ಇಡೀ ಘಟನೆಯನ್ನು ಬ್ಯಾಂಕ್​ನ ರಿಸ್ಕ್ ಮ್ಯಾನೇಜ್ಮೆಂಟ್ ಕಮಿಟಿಯ ಗಮನಕ್ಕೆ ತರಲು ಆರು ತಿಂಗಳು ಬೇಕಾಯಿತು. ಘಟನೆ ನಡೆದದ್ದ 2023ರ ಆಗಸ್ಟ್ 9ರಂದು. ಬ್ಯಾಂಕ್​ನ ರಿಸ್ಕ್ ಮ್ಯಾನೇಜ್ಮೆಂಟ್ ವಿಭಾಗವು ಈ ಘಟನೆ ಬಗ್ಗೆ ಕಮಿಟಿಯ ಗಮನಕ್ಕೆ ತಂದಿದ್ದು 2024ರ ಮಾರ್ಚ್ 4ರಂದು. ಅಂದರೆ ಆರು ತಿಂಗಳವರೆಗೂ ಬ್ಯಾಂಕ್​ನ ಮ್ಯಾನೇಜ್ಮೆಂಟ್​​ಗೆ ಈ ಪ್ರಮಾದ ಗೊತ್ತೇ ಆಗಿರಲಿಲ್ಲ. ಇದು ವಾಸ್ತವವಾಗಿ ಆತಂಕಪಡುವ ಸಂಗತಿ.

ವಿಳಂಬ ಇಷ್ಟಕ್ಕೇ ಸೀಮಿತವಾಗಿಲ್ಲ. ಮಂಡಳಿಯು ಈ ಘಟನೆ ಬಗ್ಗೆ ವರದಿ ಸಲ್ಲಿಸಿ, ಪ್ರಮಾಣೀಕೃತ ಲೆಕ್ಕಪರಿಶೋಧಕರಿಂದ ಬ್ಯಾಂಕ್​ನ ಐಟಿ ಸಿಸ್ಟಂಗಳನ್ನು ಆಡಿಟ್ ಮಾಡಿಸಿ, ಎಲ್ಲಿ ತಪ್ಪಾಗಿದೆ ಎಂಬುದನ್ನು ಪತ್ತೆ ಮಾಡಿ ಆ ದೋಷವನ್ನು ಸರಿಪಡಿಸಲು ಮತ್ತಷ್ಟು ತಿಂಗಳುಗಳು ಗತಿಸಿದ್ದವು.

ಬ್ಯಾಂಕ್​ನ ಆಂತರಿಕ ವ್ಯವಸ್ಥೆ ಬಗ್ಗೆ ಆರ್​ಬಿಐ ಕೂಡ ಆತಂಕಪಟ್ಟಿದೆ. ಒಂದು ವೇಳೆ ಅಷ್ಟು ಬೃಹತ್ ಹಣ ವರ್ಗಾವಣೆ ಆಗಿದ್ದು ಇನಾಪರೇಟಿವ್ ಅಕೌಂಟ್​ಗೆ ಅಲ್ಲವಾಗಿದ್ದರೆ ಎಂಥ ಅನಾಹುತವಾಗುತ್ತಿತ್ತು ಎಂಬ ಪ್ರಶ್ನೆ ಇದೆ. ಕರ್ಣಾಟಕ ಬ್ಯಾಂಕ್​ನ ಮ್ಯಾನೇಜ್ಮೆಂಟ್ ನಾಲ್ಕೈದು ಹಿರಿಯ ಅಧಿಕಾರಿಗಳು ಈ ಘಟನೆಗೆ ದೋಷಿಗಳೆಂದು ಗುರುತಿಸಿ, ಅವರನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಹೇಳಲಾಗಿದೆ.