ಡೈಲಿ ವಾರ್ತೆ:15 ಆಗಸ್ಟ್ 2023
ಕೋಟ ಜಾಮಿಯಾ ಜುಮ್ಮಾ ಮಸೀದಿಯಲ್ಲಿ 77 ನೇ ಸ್ವಾತಂತ್ರ್ಯೋತ್ಸವ ಆಚರಣೆ:
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಧ್ವಜಾರೋಹಣ
ಕೋಟ:ಬ್ರಹ್ಮಾವರ ತಾಲೂಕಿನ ಕೋಟ ಜಾಮಿಯಾ ಜುಮ್ಮಾ ಮಸೀದಿಯಲ್ಲಿ 77 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ 77ನೇ ಸ್ವಾತಂತ್ರೋತ್ಸವದ ಧ್ವಜಾರೋಹಣಗೈದು ಮಾತನಾಡಿ ಜಗತ್ತಿನಲ್ಲಿ ಎಲ್ಲಾ ದೇಶಗಳಿಗಿಂತ ಭಾರತ ಕೆಲವೇ ದಿನಗಳಲ್ಲಿ ಸಮರ್ಥ, ಸಮೃದ್ದ, ಸ್ವಾಭಿಮಾನ, ಶಕ್ತಿಶಾಲಿ, ಭಾರತವಾಗಲಿದೆ ಎಂದು ಇಂದಿನ ಭಾಷಣದಲ್ಲಿ ರಾಷ್ಟ್ರಪತಿಗಳು ಹೇಳಿದ್ದಾರೆ.
ಅದರಂತೆ ಭಾರತ ದೇಶವು ಮುಂದೊಂದು ದಿನ ಇಡೀ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಸಮೃದ್ಧವಾದ ದೇಶವಾಗಲಿದೆ.
ಅನೇಕ ವರ್ಷಗಳ ಕೆಳಗೆ ಭಾರತದ ಆರ್ಥಿಕತೆಯಲ್ಲಿ ಹಿಂದುಳಿದಿತ್ತು. ಆದರೆ ಇಂದಿನ ದಿನಗಳಲ್ಲಿ ಜಗತ್ತಿನಲ್ಲಿ 3ನೇ ಸ್ಥಾನದಲ್ಲಿದ್ದು ಅತ್ಯಂತ ಬಲಿಷ್ಠ ಮೂರನೇ ರಾಷ್ಟ್ರವಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ನಮ್ಮ ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ನಮ್ಮ ಬಂಧು ಎಂದು ತಿಳಿದುಕೊಂಡು ಜಾತಿ,ಮತ, ಧರ್ಮ ಎಲ್ಲಕಿಂತ ದೊಡ್ಡದು ನಮ್ಮ ದೇಶ ಎನ್ನುವ ಭಾವನೆಯನ್ನು ಇಟ್ಟುಕೊಂಡು ಎಲ್ಲರೂ ಒಂದಾಗಿ ಕೆಲಸಮಾಡಬೇಕು ಎನ್ನುವುದು ರಾಷ್ಟ್ರಪತಿಯವರ ಸಂದೇಶದ ತಾತ್ಪರ್ಯವಾಗಿದೆ ಎಂದು ಹೇಳಿದರು.
ಇಂದು ಅತ್ಯಂತ ಸಂತೋಷದ ಸಮಾಧಾನ ಎಂದರೆ ನಮ್ಮೂರ ಮಸೀದಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿರುವುದು.
ಪ್ರತಿಯೊಬ್ಬ ಭಾರತೀಯ ನೆಮ್ಮದಿಯಿಂದ ಬದುಕುವಂತ ಒಳ್ಳೆಯ ಸಮಾಜ ನಿರ್ಮಾಣ ಮಾಡಿ ತನ್ನಿಂದ ಅನ್ಯರನ್ನು ಪ್ರೀತಿಸುವ ಹಾಗೂ ಗೌರವಿಸುವ, ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯುವ ಗುಣಗಳನ್ನು ಅಳವಡಿಸಿಕೊಂಡು ಬಾಳಬೇಕು ಎಂದು ಹಾರೈಸಿದರು.
ಮಸೀದಿಯ ಅಧ್ಯಕ್ಷ ಕೆ. ಎಂ. ಸಲೀಮ್ ಸ್ವಾಗತಿಸಿದರು.
ಕಾರ್ಯದರ್ಶಿ ಬಶೀರ್ ಕೆ. ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಜಮಾತಿನ ಸರ್ವ ಸದಸ್ಯರು ಹಾಗೂ ಜಮಾತ್ ಬಾಂಧವರು ಉಪಸ್ಥಿತರಿದ್ದರು.