ಡೈಲಿ ವಾರ್ತೆ:01 ಸೆಪ್ಟೆಂಬರ್ 2023
ವರದಿ: ರವಿತೇಜ ಕಾರವಾರ
ಕಾರವಾರ: ದಲಿತ ಮುಖಂಡನಿಂದ ಹಿಂದೂ ಧರ್ಮ ಹಾಗೂ ಹಿಂದೂ ದೇವ ದೇವತೆಗಳ ಬಗ್ಗೆ ಅವಹೇಳನ – ಆರೋಪಿ ಬಂಧನಕ್ಕೆ ಆಗ್ರಹಿಸಿ ಸಾರ್ವಜನಿಕರಿಂದ ಪ್ರತಿಭಟನೆ
ಕಾರವಾರ: ಹಿಂದೂ ಧರ್ಮದ ಬಗ್ಗೆ, ಹಿಂದೂ ದೇವ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ, ತುಚ್ಛವಾಗಿ ಮಾತನಾಡಿದ ದಲಿತ ಮುಖಂಡ ಎಲಿಷಾ ಎಲಕಪಾಟಿ ಬಂಧನಕ್ಕೆ ಆಗ್ರಹಿಸಿ ನೂರಾರು ಸಂಖ್ಯೆಯಲ್ಲಿ ಕಾರವಾರದ ಜನತೆ ಗ್ರಾಮೀಣ
ಪೊಲೀಸ್ ಠಾಣೆಗೆ ಶುಕ್ರವಾರ ಮುತ್ತಿಗೆ ಹಾಕಿದರು.
ಎಲಿಷಾ ಎಲಕಪಾಟಿ ಈತನು ಹಿಂದೂ ಧರ್ಮ, ಹಿಂದೂ ದೇವರು, ಪ್ರಧಾನಿ ಮೋದಿ ಕುರಿತು ತುಚ್ಛವಾಗಿ ಮಾತನಾಡಿದ ವಿಡಿಯೋ ತುಣುಕುಗಳು ಗುರುವಾರ ವೈರಲ್ ಆಗಿತ್ತು. ಇದರಿಂದ ಆಕ್ರೋಶಗೊಂಡು ಪ್ರತಿಭಟನೆ ಗೆ ಕರೆ ನೀಡಲಾಗಿತ್ತು.
ಅದರಂತೆ ಶುಕ್ರವಾರ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಎನ್ನದೇ ಪಕ್ಷಾತೀತವಾಗಿ ರಾಜಕೀಯ ಮುಖಂಡರು, ಜನ ಪ್ರತಿನಿಧಿಗಳು, ಹಿಂದೂ ಮುಖಂಡರು ಜೊತೆಗೆ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಸಮುದಾಯದವರೂ ಸೇರಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಕಾರವಾರದ ಮಿತ್ರ ಸಮಾಜದಿಂದ ಮೆರವಣಿಗೆ ಹೊರಟು ಘೋಷಣೆ ಕೂಗಿದರು.
ಈ ವೇಳೆ ಸುಭಾಷ ಸರ್ಕಲ್ ಮೂಲಕ ಸಾಗಿ ಗ್ರಾಮೀಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಆರೋಪಿಯ ಬಂಧನಕ್ಕೆ ಆಗ್ರಹಿಸಿದರು. ಬಳಿಕ ಶಿವಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಎಲಕಪಾಟಿ ಗಡಿಪಾರಿಗೆ ಆಗ್ರಹಿಸಿದರು.
ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು. ಬಳಿಕ ಪೊಲೀಸರು ಈಗಾಗಲೇ ಎಲಕಪಾಟಿ ವಿರುದ್ಧ ದೂರು ದಾಖಲಾಗಿದ್ದು ಬಂಧನಕ್ಕೆ ತೆರಳಿದ್ದ ವೇಳೆ ಆತ ತಲೆ ಮರೆಸಿಕೊಂಡಿರುವುದು ತಿಳಿದು ಬಂದಿದೆ. ಆರೋಪಿಯನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದರು.
ಬಂಧಿಸದಿದ್ದರೆ ಮುಂದಿನ ಉಗ್ರ ಪ್ರತಿಭಟನೆಯ ಮೂಲಕ ಕಾರವಾರ ಬಂದ್ ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು ವಾಪಸ್ಸಾದರು.
ಈ ವೇಳೆ ಬಿಜೆಪಿ ವಕ್ತಾರ ನಾಗರಾಜ ನಾಯಕ ಸೇರಿದಂತೆ ಬಿಜೆಪಿ ಮುಖಂಡರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ ನಾಯ್ಕ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು,ಕಾರವಾರ ನಗರಸಭೆ ಸದಸ್ಯರು, ಹಿಂದೂ ಮುಖಂಡರು, ಮೀನುಗಾರರು ಹಾಗೂ ದಲಿತ ಸಂಘಟನೆಯವರು ಸೇರಿ ಐನೂರಕ್ಕೂ ಹೆಚ್ಚು ಮಂದಿ ಸೇರಿದ್ದರು.