ಡೈಲಿ ವಾರ್ತೆ:09 ಸೆಪ್ಟೆಂಬರ್ 2023
ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ
ಆಂಧ್ರಪ್ರದೇಶ: ತೆಲುಗು ದೇಶಂ ಪಕ್ಷದ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ನಾಯ್ಡು ಅವರನ್ನು ನಂದ್ಯಾಲದಲ್ಲಿ ನಂದ್ಯಾಲ ಪೊಲೀಸರ ಸಹಾಯದಿಂದ ಆಂಧ್ರಪ್ರದೇಶದ ಸಿಐಡಿ ಪೊಲೀಸರು ಶನಿವಾರ ಬೆಳಿಗ್ಗೆ 6 ಗಂಟೆಗೆ ಬಂಧಿಸಿದ್ದಾರೆ.
ಆಂಧ್ರಪ್ರದೇಶ ಕೌಶಲ್ಯಾಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 7100 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯ್ಡು ಅವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಬಂಧಿಸಲು ಸಿಐಡಿ ಪೊಲೀಸರು ನಾಯ್ಡು ಅವರು ಉಳಿದುಕೊಂಡಿದ್ದ ನಂದ್ಯಾಲ ಮನೆಗೆ ಮಧ್ಯರಾತ್ರಿ 3 ಗಂಟೆಗೆ ತೆರಳಿದ್ದರು. ಈ ವೇಳೆ ಟಿಡಿಪಿ ಕಾರ್ಯಕರ್ತರಿಂದ ಭಾರಿ ಗಲಾಟೆಗಳು ನಡೆದವು ಎಂದು ತಿಳಿದು ಬಂದಿದೆ.
ಸದ್ಯ ನಾಯ್ಡು ಅವರನ್ನು ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ವಿಜಯವಾಡಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988 ಅನ್ವಯ ನಾಯ್ಡು ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಾಯ್ಡು ಅವರ ಬಂಧನವನ್ನೂ ಸುದ್ದಿಸಂಸ್ಥೆ ಎಎನ್‌ಐ ಖಚಿತಪಡಿಸಿದೆ.
ಟಿಡಿಪಿ ಈ ಬಗ್ಗೆ ಟ್ವಿಟ್ ಮಾಡಿದ್ದು, ನಾಯ್ಡು ಅವರನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿದೆ.