

ಡೈಲಿವಾರ್ತೆ:16/ಮಾರ್ಚ್/2026


ಸಾಸ್ತಾನ: ಸಿರಿ ಸಿಂಗಾರ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಕೋಟ: ಬ್ರಹ್ಮಾವರ ತಾಲೂಕಿನ ಸಾಸ್ತಾನದ ಗುಂಡ್ಮಿಯಲ್ಲಿ ಇರುವ ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ನಡೆಯಲಿರುವ ದ್ವಿತೀಯ ವರ್ಷದ ಸಿರಿ ಸಿಂಗಾರ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ಸಾನಿಧ್ಯದಲ್ಲಿ ಸೋಮವಾರ ಜರುಗಿತು.
ಕಾರ್ಯಕ್ರಮದಲ್ಲಿ ಮಣೂರು ಪಡುಕೆರೆಯ ಗೀತಾನಂದ ಪ್ರತಿಷ್ಠಾನದ ಪ್ರವರ್ತಕರೂ ಹಾಗೂ ಗುಂಡ್ಮಿಯ ಶ್ರೀ ಬಬ್ಬುಸ್ವಾಮಿ ಪರಿವಾರ ದೈವಗಳ ದೈವಸ್ಥಾನದ ನೇಮೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆದ ಆನಂದ್ ಸಿ. ಕುಂದರ್ ಅವರು ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ಸಿರಿ ಸಿಂಗಾರ ನೇಮೋತ್ಸವವು ಭಕ್ತಿಭಾವದಿಂದ ಹಾಗೂ ಸಾಂಪ್ರದಾಯಿಕ ವೈಭವದಿಂದ ನಡೆಯುವ ಮಹತ್ವದ ಧಾರ್ಮಿಕ ಉತ್ಸವವಾಗಿದೆ. ಈ ಉತ್ಸವವು ಕ್ಷೇತ್ರದ ಸಂಪ್ರದಾಯ, ಭಕ್ತಿ ಮತ್ತು ಸಮಾಜದ ಐಕ್ಯತೆಯನ್ನು ಬಲಪಡಿಸುವ ಕಾರ್ಯವಾಗಿದ್ದು, ಊರ ಪರ ಊರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವದ ಕೃಪೆಗೆ ಪಾತ್ರರಾಗಬೇಕು ಎಂದು ಅವರು ಕರೆ ನೀಡಿದರು. ಎಲ್ಲರ ಸಹಕಾರದಿಂದ ನೇಮೋತ್ಸವವನ್ನು ಅದ್ದೂರಿಯಾಗಿ ಹಾಗೂ ಯಶಸ್ವಿಯಾಗಿ ನಡೆಸಲು ಸಾಧ್ಯವಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯ ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಎ. ಕುಂದರ್, ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘದ ನಿರ್ದೇಶಕರಾದ ರಮೇಶ್ ಕಾರಂತ, ಸುಭಾಷ್ ಶೆಟ್ಟಿ ಗಿಳಿಯಾರು, ಶ್ರೀ ಕ್ಷೇತ್ರದ ನೇಮೋತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಉಡುಪಿ ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಕೇಶವ ಕುಂದರ್, ನೇಮೋತ್ಸವ ಸಮಿತಿಯ ಪದಾಧಿಕಾರಿಗಳು, ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಮಾಜಿ ಅಧ್ಯಕ್ಷರಾದ ಸುಲತಾ ಹೆಗ್ಡೆ, ಶ್ರೀ ಕ್ಷೇತ್ರ ಗುಂಡ್ಮಿಯ ಮುಕ್ತೇಸರರಾದ ಬಿ. ಉದಯ್ ಶೆಟ್ಟಿ, ಪ್ರತಾಪ್ ಶೆಟ್ಟಿ ಸಾಸ್ತಾನ, ನಾಗರಾಜ್ ಗಾಣಿಗ ಸಾಲಿಗ್ರಾಮ, ಜಗದೀಶ್ ಬಾಳೆಬೆಟ್ಟು ಮಣೂರು, ಗುರಿಕಾರರು, ಅರ್ಚಕರು, ಶ್ರೀ ಕ್ಷೇತ್ರದ ಮಹಿಳಾ ಘಟಕದ ಪ್ರತಿನಿಧಿಗಳು, ಆಡಳಿತ ಮಂಡಳಿ ಸದಸ್ಯರು ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.