

ಡೈಲಿವಾರ್ತೆ:16/ಮಾರ್ಚ್/2026


ಶಿರಸಿ| ಬಾವಿಗೆ ಬಿದ್ದು ಪೈಪ್ ಹಿಡಿದು ಪ್ರಾಣ ಉಳಿಸಿಕೊಂಡ 2 ವರ್ಷದ ಭುವಿ: ರಕ್ಷಕನಾದ ಪಯಾಜ್ ಚೌಟಿ!

ಶಿರಸಿ: ಆಟವಾಡುತ್ತಾ ಆಕಸ್ಮಿಕವಾಗಿ ಆಳವಾದ ಬಾವಿಗೆ ಬಿದ್ದು, ಸಾವಿನೊಂದಿಗೆ ಹೋರಾಡುತ್ತಿದ್ದ ಎರಡು ವರ್ಷದ ಹಸುಳೆಯನ್ನು ನೆರೆಮನೆಯ ವ್ಯಕ್ತಿಯೊಬ್ಬರು ಸಮಯಪ್ರಜ್ಞೆ ಮೆರೆದು ರಕ್ಷಿಸಿದ ರೋಚಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಕಸ್ತೂರಬಾ ನಗರದಲ್ಲಿ ನಡೆದಿದೆ.
ಘಟನೆಯ ವಿವರ:
ಇಲ್ಲಿನ ನಿವಾಸಿಗಳಾದ ಪುಟ್ಟ ಬಾಲಕಿ ಭುವಿ (2) ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾಳೆ. ಮನೆಯಲ್ಲಿ ಮಗು ಕಾಣದಿದ್ದಾಗ ಆತಂಕಗೊಂಡ ಅಜ್ಜಿ ಎಲ್ಲೆಡೆ ಹುಡುಕಾಡಿದ್ದಾರೆ. ಬಾವಿಯ ಸಮೀಪ ಹೋದಾಗ ಮಗುವಿನ ಅಳುವಿನ ಶಬ್ದ ಕೇಳಿಬಂದಿದೆ. ಗಾಬರಿಯಿಂದ ಬಾವಿಯೊಳಗೆ ಇಣುಕಿ ನೋಡಿದಾಗ, ಮಗು ನೀರಿನಲ್ಲಿ ಮುಳುಗದೆ ಅಲ್ಲಿನ ಮೋಟಾರ್ ಪಂಪ್ ಪೈಪ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡು ಪ್ರಾಣಾಪಾಯದಿಂದ ಪಾರಾಗಲು ಹೋರಾಡುತ್ತಿರುವುದು ಕಂಡುಬಂದಿದೆ.
ಕ್ಷಣಾರ್ಧದಲ್ಲಿ ಧಾವಿಸಿದ ರಕ್ಷಕ:
ಬಾಲಕಿಯ ಪ್ರಾಣಾಪಾಯದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ನೆರೆಮನೆಯ ನಿವಾಸಿ ಪಯಾಜ್ ಚೌಟಿ, ವಿಳಂಬ ಮಾಡದೆ ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದಾರೆ. ಅತೀ ವೇಗವಾಗಿ ಕಾರ್ಯಪ್ರವೃತ್ತರಾದ ಅವರು, ಪೈಪ್ ಹಿಡಿದು ತೂಗಾಡುತ್ತಿದ್ದ ಬಾಲಕಿಯನ್ನು ಸುರಕ್ಷಿತವಾಗಿ ಮೇಲಕ್ಕೆ ತಂದಿದ್ದಾರೆ.
ಸಾರ್ವಜನಿಕರ ಪ್ರಶಂಸೆ:
ಜಾತಿ-ಧರ್ಮದ ಹಂಗಿಲ್ಲದೆ ಮಗುವಿನ ಪ್ರಾಣ ಉಳಿಸಲು ಪ್ರಾಣದ ಹಂಗು ತೊರೆದು ಬಾವಿಗೆ ಇಳಿದ ಪಯಾಜ್ ಚೌಟಿ ಅವರ ಸಾಹಸಕ್ಕೆ ಈಗ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಮಯಕ್ಕೆ ಸರಿಯಾಗಿ ಪಯಾಜ್ ಅವರು ಸ್ಪಂದಿಸದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಮಗು ಭುವಿ ಸದ್ಯ ಸುರಕ್ಷಿತವಾಗಿದ್ದು, ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.