ಡೈಲಿವಾರ್ತೆ:16/ಮಾರ್ಚ್/2026

ಕುಂದಾಪುರ ಹಾಗೂ ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಪ್ರಕ್ರಿಯೆ ಚುರುಕು: ನಾಳೆ ಕೋಟೇಶ್ವರದಲ್ಲಿ ಅಭಿಪ್ರಾಯ ಸಂಗ್ರಹ ಸಭೆ

​ಉಡುಪಿ: ಕುಂದಾಪುರ ವಿಧಾನಸಭಾ ಕ್ಷೇತ್ರದ ಕುಂದಾಪುರ ಮತ್ತು ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಗೆ ನೂತನ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ, ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸಲು ಮಾಚ್೯ 17 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಕೋಟೇಶ್ವರದ ‘ಸಹನ ಹೋಟೆಲ್’ನಲ್ಲಿ ಮಹತ್ವದ ಸಭೆ ಕರೆಯಲಾಗಿದೆ.

​ಕೆ.ಪಿ.ಸಿ.ಸಿ ಅಧ್ಯಕ್ಷರಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಆದೇಶದಂತೆ ಈ ಸಭೆ ಆಯೋಜಿತವಾಗಿದ್ದು, ಪಕ್ಷದ ಸಂಘಟನೆಯ ದೃಷ್ಟಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಲು ಈ ಪ್ರಕ್ರಿಯೆ ನಡೆಯಲಿದೆ. ಕೆ.ಪಿ.ಸಿ.ಸಿ ಉಪಾಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀ ವಿ.ಆರ್. ಸುದರ್ಶನ್ ಮತ್ತು ಶ್ರೀ ಎಂ. ನಾರಾಯಣಸ್ವಾಮಿ ಅವರು ವೀಕ್ಷಕರಾಗಿ ಆಗಮಿಸಿ ಸ್ಥಳೀಯ ಮುಖಂಡರ ಅಹವಾಲು ಸ್ವೀಕರಿಸಲಿದ್ದಾರೆ.

ಈ ಸಭೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಹಿರಿಯ ನಾಯಕರು, 2023ರ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಜೊತೆಗೆ ಕುಂದಾಪುರ ಮತ್ತು ಕೋಟ ಬ್ಲಾಕ್ ಸಮಿತಿಯ ಹಾಲಿ ಹಾಗೂ ಮಾಜಿ ಅಧ್ಯಕ್ಷರುಗಳು, ಕ್ಷೇತ್ರದ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಎಲ್ಲಾ ಮುಂಚೂಣಿ ಘಟಕಗಳ ಮತ್ತು ವಿಭಾಗಗಳ ಮುಖ್ಯಸ್ಥರು ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತ್ತು ​ಸಂಬಂಧಪಟ್ಟ ಎಲ್ಲಾ ಮುಖಂಡರು ಸಭೆಗೆ ಆಗಮಿಸಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಕುರಿತು ತಮ್ಮ ಸೂಕ್ತವಾದ ಅಭಿಪ್ರಾಯಗಳನ್ನು ಮುಕ್ತವಾಗಿ ಮಂಡಿಸಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.