ಡೈಲಿ ವಾರ್ತೆ:09 ಸೆಪ್ಟೆಂಬರ್ 2023
‘ಶಕ್ತಿ’ ಯೋಜನೆ ವಿರೋಧಿಸಿ ಸೆ. 11 ರಂದು ಬೆಂಗಳೂರು ಬಂದ್: ಪಟ್ಟು ಬಿಡದ ಸಾರಿಗೆ ಸಂಘಗಳ ಒಕ್ಕೂಟ, ಸಂಧಾನ ಸಭೆ ವಿಫಲ
ಬೆಂಗಳೂರು: ಸೆ.11 ರಂದು ಬೆಂಗಳೂರು ನಗರ ಬಂದ್‍ಗೆ ಖಾಸಗಿ ವಾಹನ ಚಾಲಕರ ಒಕ್ಕೂಟ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮೊದಲ ಬಂದ್ ಬಿಸಿ ಮುಟ್ಟಲಿದೆ.
ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಯಶಸ್ಸು ಸರ್ಕಾರಕ್ಕೆ ಅನುಕೂಲವಾದರೆ ಖಾಸಗಿ ವಾಹನಗಳಾದ ಆಟೋ, ಓಲಾ, ಉಬರ್ ಸೇರಿದಂತೆ ಖಾಸಗಿ ಬಸ್‍ಗಳಿಗೆ ದೊಡ್ಡ ಪೆಟ್ಟು ಕೊಟ್ಟಿದೆ. ಮಹಿಳೆಯರು ಅವುಗಳಲ್ಲಿ ಸಂಚರಿಸುವುದನ್ನೇ ಬಿಟ್ಟಿದ್ದಾರೆ. ಇದು ಖಾಸಗಿ ವಾಹನ ಚಾಲಕರ ಹಾಗೂ ಮಾಲೀಕರ ಆತಂಕಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಪರಿಹಾರ ಕೊಡುವಂತೆ ಸರ್ಕಾರಕ್ಕೆ ಒತ್ತಡ ಕೂಡ ತರಲಾಗಿತ್ತು. ಆದರೆ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಬೆಂಗಳೂರು ಬಂದ್‍ಗೆ ಕರೆ ನೀಡಲಾಗಿದೆ.
ಭಾನುವಾರ ರಾತ್ರಿ 12 ಗಂಟೆಯಿಂದಲೇ ಖಾಸಗಿ ವಾಹನ ಸಂಚಾರ ಬಂದ್ ಆಗಲಿದ್ದು, ಸೋಮವಾರ ರಾತ್ರಿ 12 ಗಂಟೆವರೆಗೆ ಬಂದ್ ಮಾಡಲು ಒಕ್ಕೂಟ ನಿರ್ಧಾರ ಮಾಡಿದೆ. ಬಂದ್ ಬಗ್ಗೆ ಜನರಿಗೆ ತಿಳಿಸಲು ಮತ್ತು ಬಂದ್‍ಗೆ ಬೆಂಬಲ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಕೂಡ ಮಾಡಿದೆ. ಕೆ.ಜಿ ರೋಡ್, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಕೆ.ಆರ್ ಮಾರ್ಕೆಟ್, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಬಂದ್ ದಿನ ಏನಿದೆ, ಏನಿಲ್ಲ?
32 ಸಂಘಟನೆಗಳ 7 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚಾರ ನಿಲ್ಲಿಸಲಿವೆ. ಏರ್‌ಪೋರ್ಟ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ. ಓಲಾ, ಊಬರ್ ಆಟೋ ಟ್ಯಾಕ್ಸಿ ಬಂದ್ ಆಗಲಿದೆ. ಕಾರ್ಪೋರೇಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಬಸ್‍ಗಳು ಕೂಡ ಬಂದ್‍ಗೆ ಬೆಂಬಲ ನೀಡಿದ್ದು ಸಂಚಾರ ಸ್ಥಗಿತಗೊಳಿಸಲಿವೆ.
ಖಾಸಗಿ ವಾಹನಗಳ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸುವವರಿಗೂ ಬಂದ್ ಬಿಸಿ ತಟ್ಟಲಿದೆ. ಗೂಡ್ಸ್ ವಾಹನಗಳು ಬಂದ್ ಆಗುವ ಸಾಧ್ಯತೆ ಇದೆ. ನಗರದಲ್ಲಿ 3 ಲಕ್ಷ ಆಟೋ (Auto), 1.5 ಲಕ್ಷ ಟ್ಯಾಕ್ಸಿ, 20 ಸಾವಿರ ಗೂಡ್ಸ್ ವಾಹನಗಳು, 5 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 80 ಸಾವಿರ ಸಿಟಿ ಟ್ಯಾಕ್ಸಿ ಮತ್ತು ಕಾರ್ಪೋರೇಟ್ ಕಂಪನಿಯ ಬಸ್‍ಗಳು ಸೇವೆಯಿಂದ ಹೊರಗುಳಿಯಲಿವೆ. ಒಟ್ಟು 5 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚಾರವನ್ನು ನಿಲ್ಲಿಸಲಿವೆ. ಅಲ್ಲದೇ ಹೋಟೆಲ್ ಮಾಲೀಕರ ಸಂಘದ ಬಳಿಯೂ ಬಂದ್‍ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಲಾಗಿದ್ದು ಹೋಟೆಲ್‍ಗಳು ಬಂದ್ ಆಗುವ ಸಾಧ್ಯತೆ ಇದೆ. ಇದರೊಂದಿಗೆ ವರ್ತಕರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಬೀದಿ ಬದಿ ವ್ಯಾಪಾರಿಗಳೊಂದಿಗೆ ಬಂದ್‍ಗೆ ಬೆಂಬಲಿಸುವಂತೆ ಕೇಳಿಕೊಳ್ಳಲಾಗಿದೆ.
ಪ್ರತಿಭಟನಾಕಾರರು ನಗರದೊಳಗೆ ಬೃಹತ್ ಮೆರವಣಿಗೆಗೆ ತಯಾರಿ ಮಾಡಿಕೊಂಡಿದ್ದು, ಮೆರವಣಿಗೆ ಬಳಿಕ ಫ್ರೀಡಂ ಪಾರ್ಕ್‍ನಲ್ಲಿ ಶಕ್ತಿ ಪ್ರದರ್ಶನಕ್ಕೆ ತಯಾರಾಗಿದ್ದಾರೆ.