ಡೈಲಿ ವಾರ್ತೆ:09 ಸೆಪ್ಟೆಂಬರ್ 2023
ಸೆ. 11 ರಂದು ಉಡುಪಿ ಜಿಲ್ಲಾ ರೈತ ಸಂಘ(ರಿ.) ಹೋರಾಟ ಸಮಾಲೋಚನೆಗೆ ತುರ್ತುಸಭೆ
ಬ್ರಹ್ಮಾವರ: ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ (ರಿ.) ಬ್ರಹ್ಮಾವರ ಇದರ ಗುಜರಿ ಮಾರಾಟದ ಹೆಸರಲ್ಲಿ 14 ಕೋಟಿಗೂ ಮಿಕ್ಕಿ ಹಣವನ್ನು ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಸಕ್ಕರೆ ಕಾರ್ಖಾನೆಗೆ ವಂಚಿಸಿದ್ದಾರೆ ಹಾಗೂ ಸಲ್ಲಬೇಕಾಗಿದ್ದಷ್ಟು GST ಹಣವನ್ನು ಸರ್ಕಾರದ ಬೊಕ್ಕಸಕ್ಕೆ ಸಲ್ಲಿಸದೆ ನಷ್ಟವನ್ನುಂಟು ಮಾಡಿದ್ದಾರೆ. ಕಾರ್ಖಾನೆಯ ತಳಪಾಯದ ಕಲ್ಲನ್ನೂ ಬಿಡದೆ ಎಲ್ಲವನ್ನೂ ಮಾರಾಟ ಮಾಡಿ ಹಲವು ಕಾನೂನುಬಾಹಿರ ಕೃತ್ಯಗಳನ್ನು ಎಸಗಿದ್ದಾರೆ.
ಈ ವಿಚಾರಗಳನ್ನು ಜಿಲ್ಲೆಯ ರೈತರ ಗಮನಕ್ಕೆ ತರಲು ಮತ್ತು ಈ ಕೃತ್ಯಗಳನ್ನು ಎಸಗಿರುವ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಲು ರೈತರ ಹಾಗೂ ಸಹಕಾರಿ ಸಕ್ಕರೆ ಕಾರ್ಖಾನೆಯ ಸದಸ್ಯರ ಸಭೆಯನ್ನು ದಿನಾಂಕ 11 ರಂದು ಸೋಮವಾರ ಬೆಳಿಗ್ಗೆ 9:30 ಕ್ಕೆ ಬ್ರಹ್ಮಾವರ ಅಂಬಾ ಸಭಾಭವನ – ಹೊಟೇಲ್ ಆಶ್ರಯದಲ್ಲಿ ಕರೆಯಲಾಗಿದೆ.
ಆದ್ದರಿಂದ ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆಯ ಹಿತದೃಷ್ಟಿಯಿಂದ, ಕಾರ್ಖಾನೆಯ ಉಳಿವಿಗಾಗಿ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಯಲ್ಲಿ ಭಾಗವಹಿಸಬೇಕು ಮತ್ತು ಸಲಹೆ ಸೂಚನೆಗಳನ್ನು ನೀಡುವ ಮೂಲಕ ಈ ಹೋರಾಟವನ್ನು ಬಲಪಡಿಸಿ, ಅದರ ತಾರ್ಕಿಕ ತುದಿ ಮುಟ್ಟಿಸುವುದಕ್ಕೆ ನಮ್ಮ ಜೊತೆ ಸೇರಬೇಕೆಂದು ರೈತ ಸಂಘ ತಮ್ಮನ್ನು ಕೋರಿಕೊಂಡಿದೆ.