ಡೈಲಿ ವಾರ್ತೆ: 01/OCT/2023
ಕಲ್ಲಡ್ಕ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಚರಂಡಿಗೆ ಬಿದ್ದ ಲಾರಿ – ಚಾಲಕ ಪಾರು!
ಬಂಟ್ವಾಳ : ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಕಲ್ಲಡ್ಕ ಸರ್ವೀಸ್ ರಸ್ತೆಯ ಚರಂಡಿಗೆ ಘನಗಾತ್ರದ ಲಾರಿಯೊಂದು ಬಿದ್ದ ಪರಿಣಾಮ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಆದಿತ್ಯವಾರ ಬೆಳಿಗ್ಗಿನ ವೇಳೆ ನಡೆದಿದೆ.
ಕಲ್ಲಡ್ಕದ ಪೇಟೆ ಸಮೀಪದ ಪೂರ್ಲಿಪಾಡಿ ಬಳಿ ಸರ್ವೀಸ್ ರಸ್ತೆಯ ಬದಿಯಲ್ಲಿ ಮಳೆ ನೀರು ಹರಿದು ಹೋಗಲು ತಾತ್ಕಾಲಿಕವಾಗಿ ಮಾಡಲಾದ ಚರಂಡಿಗೆ ಲಾರಿ ಬಿದ್ದಿದೆ.
ಇದರಿಂದಾಗಿ ಕೆಲಕಾಲ ರಸ್ತೆ ತಡೆ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಬಂಟ್ವಾಳ ಸಂಚಾರಿ ಪೊಲೀಸರು ವಾಹನ ಸಂಚಾರಕ್ಕೆ ಅನುವುಕೊಟ್ಟರು.
ಇಲ್ಲಿ ರಸ್ತೆ ಮತ್ತು ಚರಂಡಿ ಎರಡು ಒಂದೇ ರೀತಿಯಲ್ಲಿ ಸಮನಾಗಿದೆ. ಹಾಗಾಗಿ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿ ರಸ್ತೆಯ ಬದಿಗೆ ಸರಿದರೆ ವಾಹನಗಳು ಹೂತು ಹೋಗುವುದು ಗ್ಯಾರಂಟಿ. ಪ್ಲೈ ಓವರ್ ನಿರ್ಮಾಣ ಮಾಡುವ ಸಂದರ್ಭ ಎರಡು ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಮಾಡಲಾಗಿದೆ.
ಆದರೆ ಸರ್ವೀಸ್ ರಸ್ತೆಯನ್ನು ಪರಿಪೂರ್ಣ ರೀತಿಯಲ್ಲಿ ಮಾಡದೆ ಜನರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ ಎಂಬುದು ಸಾರ್ವಜನಿಕ ಆರೋಪ. ಕನಿಷ್ಟ ಡಾಮರೀಕರಣ ಮಾಡಿದರೆ ಇವರ ಪ್ಲೈ ಓವರ್ ಕಾಮಗಾರಿ ಮುಗಿಯುವವರೆಗೆ ಸಂಚಾರ ಮಾಡಬಹುದಿತ್ತು.ಇದೀಗ ಕೆಸರು ಮಿಶ್ರಿತ ಅವೈಜ್ಞಾನಿಕ ರೀತಿಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆ ಒಂದು ಕಡೆಯಾದರೆ, ಇನ್ನೊಂದು ಕಡೆ ವಾಹನಗಳ ಅಪಘಾತಗಳು ನಿತ್ಯ ಸಂಭವಿಸುತ್ತಿದ್ದು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.