ಡೈಲಿ ವಾರ್ತೆ: 07/OCT/2023

ಏಷ್ಯನ್‌ ಗೇಮ್ಸ್‌ – 2023 ಕಬಡ್ಡಿ ಫೈನಲ್‌ನಲ್ಲಿ ಪಾಯಿಂಟ್‌ಗಾಗಿ ಕಿತ್ತಾಟ, 1 ಗಂಟೆ ಆಟ ಸ್ಥಗಿತ: ಕೊನೆಗೂ ಚಿನ್ನ ಗೆದ್ದ ಭಾರತ

ಹ್ಯಾಂಗ್‌ಝೋ: ಹಲವು ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಗಿದ್ದ ಏಷ್ಯನ್‌ ಗೇಮ್ಸ್‌ 2023) ಕಬಡ್ಡಿ ಫೈನಲ್‌ನಲ್ಲಿ ಇರಾನ್‌ ತಂಡವನ್ನು29 – 33 ಅಂಕಗಳಿಂದ ಸೋಲಿಸಿ ಭಾರತ ಚಿನ್ನದ ಪದಕವನ್ನು ಗೆದ್ದುಕೊಂಡಿದೆ.

ಈ ಮೂಲಕ ಈ ಕ್ರೀಡಾಕೂಟದ ಮಹಿಳೆಯರ ಮತ್ತು ಪುರುಷರ ಎರಡೂ ಕಬಡ್ಡಿಯಲ್ಲಿ ಭಾರತ ಚಾಂಪಿಯನ್‌ ಪಟ್ಟ ಅಲಂಕರಿಸಿದೆ.

ಎರಡು ತಂಡಗಳು 28 ಅಂಕಗಳಿಸಿದ್ದಾಗ ಭಾರತದ ಪವನ್‌ ಶೆರಾವತ್‌ ರೈಡ್ ಮಾಡುತ್ತಿದ್ದರು. ಡು-ಆರ್‌-ಡೈ ರೈಡ್‌ ವೇಳೆ ಇರಾನ್‌ ಆಟಗಾರನ್ನು ಟಚ್‌ ಮಾಡಲು ಪ್ರಯತ್ನಿಸಿ ವಿಫಲರಾಗಿ ಲಾಬಿ ಗೆರೆಯನ್ನು ಟಚ್‌ ಮಾಡಿದರು. ಈ ವೇಳೆ ಇರಾನಿನ 4 ಆಟಗಾರರು ಲಾಬಿಯಲ್ಲಿ ಪವನ್‌ ಅವರನ್ನು ಹಿಡಿದರು.

ಪವನ್‌ ಔಟಾದ ಬೆನ್ನಲ್ಲೇ ಇರಾನ್‌ ತಂಡಕ್ಕೆ 1 ಅಂಕವನ್ನು ನೀಡಲಾಯಿತು. ಈ ತೀರ್ಪು ಬಂದ ಕೂಡಲೇ ಭಾರತದ ತಂಡ ಆಟಗಾರರು, ಕೋಚ್‌ ಅಂಪೈರ್‌ ಜೊತೆ ಅಂಕ ನೀಡುವುಂತೆ ಚರ್ಚೆ ನಡೆಸಿದರು.

ನಂತರ ರಿವ್ಯೂ ನೋಡಿದಾಗ ಪವನ್‌ ಇರಾನ್‌ ಆಟಗಾರರನ್ನು ಟಚ್‌ ಮಾಡದೇ ಇರುವ ವಿಷಯ ದೃಢಪಟ್ಟಿತ್ತು. ರಿವ್ಯೂ ನಂತರ ಭಾರತ ತಂಡಕ್ಕೆ 4 ಅಂಕಗಳನ್ನು ನೀಡಲಾಯಿತು. ಭಾರತಕ್ಕೆ 4 ಅಂಕ ನೀಡಿದ್ದಕ್ಕೆ ಇರಾನ್‌ ತಂಡ ಭಾರೀ ವಿರೋಧ ವ್ಯಕ್ತಪಡಿಸಿತು. ಎರಡು ತಂಡಗಳು ಅಂಕದ ವಿಷಯದ ಬಗ್ಗೆ ವಾದ ಮುಂದುವರಿಸುತ್ತಿದ್ದಂತೆ ಪಂದ್ಯವನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.

ನಿಮಯ ಏನು ಹೇಳುತ್ತೆ?
ರೈಡರ್‌ ಎದುರಾಳಿ ಆಟಗಾರನನ್ನು ಟಚ್‌ ಮಾಡದೇ ಲಾಬಿಯನ್ನು ಟಚ್‌ ಮಾಡಿದಾಗ ಎದುರಾಳಿ ಆಟಗಾರರು ರೈಡರ್‌ ಅನ್ನು ಹಿಡಿದರೆ ಆಗ ಆ ಎಲ್ಲಾ ಡಿಫೆಂಡರ್‌ಗಳು ಔಟ್‌ ಎಂದು ಅಂತಾರಾಷ್ಟ್ರೀಯ ಕಬಡ್ಡಿಯ ನಿಯಮ ಹೇಳುತ್ತದೆ. ಆದರೆ ಭಾರತದಲ್ಲಿ ನಡೆಯುವ ಪ್ರೊ ಕಬಡ್ಡಿಯಲ್ಲಿ ಈ ನಿಯಮವನ್ನು ಬದಲಾಯಿಸಲಾಗಿದ್ದು, ಸಂದರ್ಭದಲ್ಲಿ ರೈಡರ್‌ ಮಾತ್ರ ಔಟ್‌ ಎಂದು ಘೋಷಿಸಲಾಗುತ್ತದೆ.

ಅಂತಾರಾಷ್ಟ್ರೀಯ ಕಬಡ್ಡಿ ನಿಯಮದ ಪ್ರಕಾರ 4 ಮಂದಿಯೂ ಔಟ್‌ ಎಂದು ಭಾರತ ವಾದಿಸಿತ್ತು. ಕೊನೆಗೆ ಯಾವ ತಂಡಕ್ಕೆ ಅಂಕ ನೀಡಬೇಕೆಂದು ಎಂದು ನಿರ್ಧಾರ ತೆಗೆದುಕೊಳ್ಳಲು ಸುಮಾರು ಒಂದು ಗಂಟೆ ಕಾಲ ಆಟವನ್ನು ಸ್ಥಗಿತಗೊಳಿಸಲಾಗಿತ್ತು. ಅಂತಿಮವಾಗಿ ವಿಡಿಯೋ ರಿಪ್ಲೈ ನೋಡಿ ರೆಫ್ರಿಗಳು ಚರ್ಚೆ ಮಾಡಿ ಭಾರತಕ್ಕೆ 4 ಅಂಕ ನೀಡಿದರು.