ಡೈಲಿ ವಾರ್ತೆ: 08/OCT/2023

ಅ. 10 ರಂದು ಕೋಟ ಕಾರಂತ ಥೀಮ್ ಪಾರ್ಕ್ ಗೆ ಕರ್ನಾಟಕ ಗೌರವಾನ್ವಿತ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಭೇಟಿ.!

ಕೋಟ:ಕೋಟ ಕಾರಂತ ಥೀಮ್ ಪಾರ್ಕ್ ಗೆ ಕರ್ನಾಟಕದ ರಾಜ್ಯಪಾಲರು ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಭೇಟಿ ನೀಡಲಿದ್ದಾರೆ.

ಡಾ. ಶಿವರಾಮ ಕಾರಂತರ ಜನ್ಮ ದಿನವಾದ ಅಕ್ಟೋಬರ್ 10, 2023 ರಂದು ಪೂರ್ವಾಹ್ನ 10.30ಕ್ಕೆ ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್‍ರವರು ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್‍ಗೆ ಭೇಟಿ ನೀಡಿ ಕಾರಂತೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಕಾರಂತ ಹುಟ್ಟೂರ ಪ್ರಶಸ್ತಿ 2023ನ್ನು ನಾಡಿನ ಖ್ಯಾತ ಸುಗಮ ಸಂಗೀತ ವಿದ್ವಾಂಸರಾದ ಡಾ. ವಿದ್ಯಾಭೂಷಣರವರಿಗೆ ಪ್ರದಾನಿಸಲಿದ್ದಾರೆ.

ವರ್ಷಂಪ್ರತಿ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಡಾ. ಕಾರಂತರ ಜನ್ಮದಿನವಾದ ಅಕ್ಟೋಬರ್ 10 ರಂದು ಸಂಜೆ ಪ್ರದಾನ ಮಾಡುವುದು ಸಂಪ್ರದಾಯ ಆದರೆ ಈ ಭಾರಿ ಘನತೆವೆತ್ತ ರಾಜ್ಯಪಾಲರು ಭಾಗವಹಿಸುತ್ತಿರುವುದರಿಂದ ಪೂರ್ವಾಹ್ನ 10.30ಕ್ಕೆ ಕಾರ್ಯಕ್ರಮದ ಸಮಯವನ್ನು ಪುನಃ ನಿಗದಿಪಡಿಸಿರುವುದನ್ನು ಸಾರ್ವಜನಿಕರು ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಗಮನಿಸಬೇಕು.
ಪೂರ್ವಾಹ್ನ 10.30ಕ್ಕೆ ಮುಂಚಿತವಾಗಿ ಕಾರಂತ ಥೀಮ್ ಪಾರ್ಕಿನ ನೂತನ ಸಭಾಂಗಣದಲ್ಲಿ ಉಪಸ್ಥಿತರಿದ್ದು ಸಮಾರಂಭದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿಸಲಾಗಿದೆ. ಸಭಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ರಾಜ್ಯ ಸಚಿವರು, ಸಂಸದರು, ಜಿಲ್ಲೆಯ ಶಾಸಕರು ಗಣ್ಯರು ಭಾಗವಹಿಸಲಿದ್ದಾರೆ. ಅದೇ ದಿನ ಸಂಜೆ 6ಕ್ಕೆ ವಿದ್ಯಾಭೂಷಣರಿಂದ ಸಂಗೀತ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷರಾದ ಆನಂದ ಸಿ ಕುಂದರ್ ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕುಂದರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.