ಡೈಲಿ ವಾರ್ತೆ: 09/OCT/2023

ಪಾಣೆಮಂಗಳೂರು ಉಕ್ಕಿನ ಸೇತುವೆಯ ಮಧ್ಯ ಭಾಗದಲ್ಲಿ ಬಿರುಕು:ಸ್ಥಳೀಯರಲ್ಲಿ ಆತಂಕ.!

ಬಂಟ್ವಾಳ : ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾದ ಪಾಣೆಮಂಗಳೂರು ಉಕ್ಕಿನ ಸೇತುವೆಯ ಮಧ್ಯ ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಅಪಾಯವನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಭಾನುವಾರ ರಾತ್ರಿ 9 ರ ಸುಮಾರಿಗೆ ಗೂಡಿನಬಳಿ ನಿವಾಸಿ ಮಹಮ್ಮದ್ ಮತ್ತು ಅವರ ಸ್ನೇಹಿತರು ಪಾಣೆಮಂಗಳೂರು ಕಡೆಯಿಂದ ಗೂಡಿನ ಬಳಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಬರುವ ವೇಳೆ ಬಿರುಕು ಬಿಟ್ಟ ಬಗ್ಗೆ ಕಾಣಿಸಿಕೊಂಡಿದೆ.
ಕೂಡಲೇ ಬಂಟ್ವಾಳ ನಗರ ಠಾಣಾ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಮತ್ತು ಕೆಲ ಹೊತ್ತಿನ ತನಕ ಸೇತುವೆಯಲ್ಲಿ ನಿಂತುಕೊಂಡು ವಾಹನ ಸವಾರರಿಗೆ ನಿಧಾನವಾಗಿ ಚಲಿಸುವಂತೆ ಕೋರಿದ್ದಾರೆ.

ಪಾಣೆಮಂಗಳೂರು ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಬರುವಾಗ ಅಕ್ಕರಂಗಡಿ ಬಳಿ ಸುಮಾರು ನಾಲ್ಕು ಪಿಲ್ಲರ್ ಗಳ ಬಳಕ ಬಿರುಕು ಕಾಣಿಸಿಕೊಂಡಿದೆ. ಡಾಮರು ಎದ್ದು ಹೋಗಿದ್ದು ಸಣ್ಣ ಗುಂಡಿಯಾಗಿರುವುದು ಕಂಡು ಬಂದಿದೆ. ಆಯುಷ್ಯ ಮುಗಿದಿರುವ ಈ ಸೇತುವೆಯಲ್ಲಿ ಬಿರುಕು ಕಂಡು ಬಂದಿದೆ.

ಈ ಹಿಂದೆ ಬಿಸಿರೋಡು ಕಡೆಯಿಂದ ಬರುವ ಗೂಡಿನಬಳಿಯ ಭಾಗದಲ್ಲಿ ಸೇತುವೆ ಕುಸಿತ ಕಂಡು ಬಂದಿತ್ತು. ಹಾಗಾಗಿ ನೂತನ ಸೇತುವೆ ಆ ಸಂದರ್ಭದಲ್ಲಿ ನಿರ್ಮಾಣ ಮಾಡಲಾಗಿತ್ತು. ನೂತನ ಸೇತುವೆ ‌ನಿರ್ಮಾಣ ವಾಗುವವರೆಗೆ ಈ ಸೇತುವೆ ಯಾವುದೇ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಆ ಬಳಿಕ ಕುಸಿತ ಕಂಡ ಭಾಗದಲ್ಲಿ ಇಲಾಖೆ ರಿಪೇರಿ ಕಾರ್ಯ ಮಾಡಿತ್ತು.ಇದೀಗ ಬಸ್ ಸಹಿತ ಅನೇಕ ಘನ ವಾಹನಗಳ ಸಂಚಾರ ನಡೆಸುತ್ತಿದ್ದವು.

ಆದರೆ ಇಲಾಖೆ ಅವಾಗಿನಿಂದಲೇ ಘನ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ ಎಂಬ ನಾಮ ಫಲಕವನ್ನು ಅಳವಡಿಸಿ ಎಚ್ಚರಿಕೆಯನ್ನು ನೀಡಿದ್ದು, ಅಪಾಯದ ಬಗ್ಗೆ ಮುನ್ಸೂಚನೆ ನೀಡಿತ್ತು. ಇವರ ಮಾತಿಗೆ ಬೆಲೆ ಕೊಡದೆ ಪಾಣೆಮಂಗಳೂರು ಪೇಟೆಯನ್ನು ಉಳಿಸಬೇಕು ಎಂಬ ಕೆಲವರು ವಾದ ಮತ್ತು ಬೇಡಿಕೆಯನ್ನು ಪೂರೈಸಲು ಬಸ್ ಸಹಿತ ಇತರ ವಾಹನಗಳು ಸಂಚಾರ ಆರಂಭಿಸಿದ್ದವು.

ಜೀವಹಾನಿಗೆ ಮುಂದೆ ಕ್ರಮವಹಿಸಿ
ಕಳೆದ ನಾಲ್ಕು ವರ್ಷಗಳ ಹಿಂದೆ ಇದೇ ರೀತಿ ಬಿರುಕು ಕಾಣಿಸಿಕೊಂಡಿದ್ದ ಮುಲಾರಪಟ್ನ ಸೇತುವೆ ಮುರಿದು ಬಿದ್ದಿತ್ತು. ಅದೃಷ್ಟವಶಾತ್ ಅ ಹೊತ್ತಿಗೆ ಯಾವುದೇ ವಾಹನಗಳು ಸಂಚಾರ ಮಾಡದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರಲಿಲ್ಲ. ಈ ಸೇತವೆ ಬಗ್ಗೆ ಸ್ಥಳೀಯರು ಮೊದಲೇ ಎಚ್ಚರಿಸಿದ್ದರು. ಆದರೆ ಇಲಾಖೆಯಾಗಲಿ ಸಾರ್ವಜನಿಕರು ಆಗಲಿ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಸೇತುವೆ ಮುರಿದು ಬಿದ್ದಾಗ ಅವರು ನೆನಪಿಸಿದ ಬಗ್ಗೆ ಜನರು ಮಾತನಾಡಿಕೊಂಡಿದ್ದರು.
ಇಲ್ಲೂ ಅದೇ ರೀತಿ ಸಾರ್ವಜನಿಕರು ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ. ಇದನ್ನು ನಿರ್ಲಕ್ಷ್ಯ ಮಾಡದೆ ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕಾಗಿದೆ.

ಬಿರುಕು ಬಿಟ್ಟು ಈ ಸೇತುವೆಯಿಂದ ಯಾವುದೇ ಅಪಾಯವಾಗದಂತೆ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮಗಳನ್ನು ವಹಿಸಿ, ಪ್ರಾಣ ಹಾನಿಯಾಗದಂತೆ ಎಚ್ಚರ ವಹಿಸಿದರೆ ಉತ್ತಮ ಎಂಬ ಮಾತುಗಳು ಕೇಳಿ ಬಂದಿವೆ.

ಮರಳು ವಾಹನಗಳ ಸಂಚಾರ ಬಿರುಕಿಗೆ ಕಾರಣವಾಯಿತೇ ?
ಪಾಣೆಮಂಗಳೂರು ಹಳೆಯ ಸೇತುವೆಯ ಅಡಿ ಭಾಗದಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯತ್ತಿದೆ ಎಂಬ ಆರೋಪಗಳು ಕೇಳುತ್ತಲೇ ಇವೆ. ಇಲ್ಲಿಂದ ಮರಳು ತುಂಬಿದ ಲಾರಿಗಳು ರಾತ್ರಿ ವೇಳೆ ಕದ್ದು ಮುಚ್ಚಿ ಓವರ್ ಲೋಡ್ ಹಾಕಿಕೊಂಡು ಹೋಗುತ್ತಿದ್ದು,ಇದೇ ಸೇತುವೆ ಬಿರುಕು ಕಾಣಿಸಿಕೊಳ್ಳುಲು ಕಾರಣವಾಯಿತೇ ? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಮಾಡುತ್ತಿದ್ದಾರೆ. ಹಾಗೂ ಅನೇಕ ಅಕ್ರಮ ಸಾಗಾಟದ ಘನ ವಾಹನಗಳು ಹಳೆಯ ಸೇತುವೆಯಲ್ಲಿ ಸಂಚಾರ ಮಾಡುತ್ತಿವೆ ಎಂಬ ಮಾತುಗಳೂ ಕೇಳಿ ಬಂದಿವೆ..